ನವದೆಹಲಿ: ಬಿಬಿಸಿ ಇಂಡಿಯಾ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯ 10 ಹಿರಿಯ ಸಿಬ್ಬಂದಿಗಳು 2 ದಿನಗಳಿಂದ ಮನೆಗೆ ತೆರಳಲು ಸಾಧ್ಯವಾಗದೇ ದೆಹಲಿಯ ಕಚೇರಿಯಲ್ಲೇ ಇದ್ದಾರೆ.
ಐಟಿ ಅಧಿಕಾರಿಗಳ ಕಾರ್ಯಾಚರಣೆ ಮೂರನೇ ದಿನವೂ ಮುಂದುವರಿದಿದ್ದು, ಹಣಕಾಸಿನ ದಾಖಲೆಗಳನ್ನು ಸಂಗ್ರಹಿಸಿದ್ದು, ಬಿಬಿಸಿ ಸುದ್ದಿ ಸಂಸ್ಥೆಯ ಎಲೆಕ್ಟ್ರಾನಿಕ್ ಮತ್ತು ಲೆಕ್ಕಪತ್ರಗಳ ದಾಖಲೆ ಪ್ರತಿಗಳನ್ನು ಪಡೆದುಕೊಂಡಿದ್ದಾರೆ.
ದೆಹಲಿಯಲ್ಲಿರುವ ಬಿಬಿಸಿ ಸಿಬ್ಬಂದಿ ಮಾಹಿತಿ ನೀಡಿದ್ದು, ಐಟಿ ಅಧಿಕಾರಿಗಳ ಕಾರ್ಯಾಚರಣೆ ನಡೆಯುತ್ತಿರುವಾಗಿನಿಂದಲೂ ಬಿಬಿಸಿ ಎಂದಿನಂತೆ ತನ್ನ ಸುದ್ದಿ ಪ್ರಸಾರ ಮಾಡುತ್ತಿದೆ ಹಾಗೂ ಸಂಸ್ಥೆಯ ಹಲವು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ. ದೆಹಲಿ ಹಾಗೂ ಮುಂಬೈ ಕಚೇರಿಗಳಲ್ಲಿ ಮಂಗಳವಾರದಂದು ಬೆಳಿಗ್ಗೆ 11:30 ಕ್ಕೆ ಐಟಿ ಸಮೀಕ್ಷೆ ಪ್ರಾರಂಭವಾಗಿತ್ತು 45 ಗಂಟೆಗಳ ನಂತರವೂ ಮುಂದುವರೆದಿದೆ.
ಯಾವಾ ಸಮೀಕ್ಷೆ ಮುಕ್ತಾಯಗೊಳ್ಳುತ್ತದೆ ಎಂಬುದು ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ತೆರಿಗೆ ಮತ್ತು ಬಹುರಾಷ್ಟ್ರೀಯ ನಿಗಮದ ವಿವಿಧ ವಿಭಾಗಗಳ ನಡುವೆ ಹಣವನ್ನು ವರ್ಗಾವಣೆ ಮಾಡಿರ್ಪುವ ವಿಧಾನದ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.