40% ಭ್ರಷ್ಟ ಸರ್ಕಾರದಿಂದ ರಾಜ್ಯ ತಲೆ ತಗ್ಗಿಸುವಂತಾಗಿದೆ – ಉಡುಪಿಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ ಆಕ್ರೋಶ

ಉಡುಪಿ:ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮನೆಯಲ್ಲಿ ಆರು ಕೋಟಿ ರುಪಾಯಿ ಪತ್ತೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲ, ಬಿಜೆಪಿ ಭ್ರಷ್ಟ ಜನತಾ ಪಾರ್ಟಿಯಾಗಿದೆ. ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. 40% ಭ್ರಷ್ಟ ಸರ್ಕಾರದಿಂದ ರಾಜ್ಯ ತಲೆತಗ್ಗಿಸುವಂತಾಗಿದೆ ಎಂದು ಹೇಳಿದರು.

ಅವರು ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಪುತ್ರನ ಮನೆಯಲ್ಲಿ 40 ಲಕ್ಷ ರೂಪಾಯಿ ರೆಡ್ ಹ್ಯಾಂಡ್ ಆಗಿ ಸಿಕ್ಕಿದೆ. 24 ಗಂಟೆ ಒಳಗೆ ಮನೆಯಲ್ಲಿ 6 ಕೋಟಿ ರೂಪಾಯಿ ಪತ್ತೆಯಾಗಿದೆ. ಶಾಸಕ ವಿರುಪಾಕ್ಷಪ್ಪ ಎಲ್ಲಿ ತಲೆಮರಸಿಕೊಂಡಿದ್ದಾರೆ?. ಮೈಸೂರು ಸ್ಯಾಂಡಲ್ ಸುವಾಸನೆಯನ್ನು ಭ್ರಷ್ಟ ಮಾಡಿಬಿಟ್ಟಿದ್ದಾರೆ. ಇದು ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಸಾಬೂನಿನಿಂದ ಇಷ್ಟು ಭ್ರಷ್ಟಾಚಾರವಾಗಿದ್ದರೆ ರಾಜ್ಯದ ಭ್ರಷ್ಟಾಚಾರ ಪ್ರಮಾಣ ಎಷ್ಟು?ಈ ಎಲ್ಲಾ ಭ್ರಷ್ಟಾಚಾರದ ಹಣ ಎಲ್ಲಿಗೆ ಹೋಗಿದೆ?ರಾಜ್ಯದಲ್ಲಿ ಲೂಟಿ ಹೊಡೆದ ಹಣಕ್ಕೆ ಯಾರು ಜವಾಬ್ದಾರಿ?ಲೂಟಿ ಹೊಡೆದ ಹಣದಲ್ಲಿ ಬಸವರಾಜ್ ಬೊಮ್ಮಾಯಿ, ಮಂತ್ರಿಗಳಿಗೆ ಎಷ್ಟು ಪಾಲು ಇದೆ?ಕೈಗಾರಿಕಾ ಸಚಿವ ನಿರಾಣಿಯ ತಲೆದಂಡ ಆಗಿಲ್ಲ ಯಾಕೆ?ಕೆ ಎಸ್ ಡಿ ಎಲ್ ಅಧ್ಯಕ್ಷ ಶಾಸಕ ವಿರೂಪಾಕ್ಷಪ್ಪ ತಲೆಮರೆಸಿಕೊಳ್ಳಲು ಬಿಟ್ಟಿದ್ಯಾಕೆ?ಈ ಭ್ರಷ್ಟಾಚಾರದಲ್ಲಿ ಬಸವರಾಜ ಬೊಮ್ಮಾಯಿ ಪಾತ್ರ ಏನು?ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೌನ ಇರುವುದು ಯಾಕೆ ನರೇಂದ್ರ ಮೋದಿ ಒಂದು ವಾಕ್ಯ ಒಂದು ಮಾತನಾಡುತ್ತಿಲ್ಲ ಯಾಕೆ?ಜೆಪಿ ನಡ್ದಾ? ಅಮಿತ್ ಶಾ ಎಲ್ಲಿದ್ದೀರಿ..!?‌ಇಡಿ, ಸಿ ಬಿ ಐ ಯಾವಾಗ ಕರ್ನಾಟಕಕ್ಕೆ ಬರುತ್ತದೆ? ಶಾಸಕರು ಮಂತ್ರಿಗಳ ಮುಖ್ಯಮಂತ್ರಿಗಳ ಮನೆಗೆ ಯಾವಾಗ ದಾಳಿ ಮಾಡುತ್ತೀರಿ? ನಾಡಿನ ಜನರ ಪರವಾಗಿ ಈ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಎಂದು ಹೇಳಿದರು.

ಚೆನ್ನಗಿರಿ ಶಾಸಕ ವಿರೂಪಾಕ್ಷಪ್ಪನ ಬಂಧನ ಆಗಬೇಕು. ಕೈಗಾರಿಕಾ ಸಚಿವ ನಿರಾಣಿಯ ತಲೆದಂಡ ಆಗಬೇಕು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜೀನಾಮೆ ಕೊಡಬೇಕು. ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಬೊಮ್ಮಾಯಿ ಮೂಗಿನ ಕೆಳಗೆ ನಡೆದ ಭ್ರಷ್ಟಾಚಾರ ಬಯಲಾಗಿದೆ.ಭ್ರಷ್ಟಾಚಾರದ ಹಣದಲ್ಲಿ ಯಾರಿಗೆಲ್ಲ ಪಾಲು ಇದೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು.ಒಳಚರಂಡಿ ಮತ್ತು ನೀರು ಸರಬರಾಜು ಬೋರ್ಡ್ ನಲ್ಲಿ ಎಷ್ಟು ಸಾವಿರ ಕೋಟಿ ಈವರೆಗೆ ಲೂಟಿ ಮಾಡಿದ್ದೀರಿ?

ಒಂದು ವಾರದಲ್ಲಿ ರಾಜ್ಯದ ಮುಖ್ಯ ನ್ಯಾಯ ಮೂರ್ತಿಗಳು ಈ ಬಗ್ಗೆ ತನಿಖೆ ನಡೆಸಬೇಕು.ಭ್ರಷ್ಟಾಚಾರ ಮತ್ತು ಲೂಟಿಯ ಸಂಪೂರ್ಣ ದಾಖಲೆಯನ್ನು ತೆರೆದಿಡಬೇಕು.ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರ ವಿಶ್ವವಿಖ್ಯಾತಿಯನ್ನು ಪಡೆದಿದೆ ಎಂದರು.

Latest Indian news

Popular Stories