4ನೇ ಸುತ್ತಿನ ಮಾತುಕತೆ ವಿಫಲ | ದೆಹಲಿಯತ್ತ ಇಂದು ರೈತರ ಹೆಜ್ಜೆ

ನವದೆಹಲಿ: ರೈತರು ಮತ್ತು ಕೇಂದ್ರ ಸಚಿವರ ನಡುವಿನ 4ನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಬುಧವಾರ ದೆಹಲಿಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಖನೌರಿ ಹಾಗೂ ಶಂಭು ಗಡಿಗಳಲ್ಲಿ 2,000 ಟ್ರಾಕ್ಟರ್‌ಗಳು ಸಜ್ಜುಗೊಂಡಿವೆ.

ಕಿಸಾನ್‌ ಮಜದೂರ್‌ ಮೋರ್ಚಾ ಶಾಂತಿಯುತ ರ್ಯಾಲಿ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ ಶಂಭು ಗಡಿಯಲ್ಲಿ 1,170 ಟ್ರ್ಯಾಕ್ಟರ್‌ಗಳು, ಖನೌರಿುಲ್ಲಿ 870 ಟ್ರ್ಯಾಕ್ಟರ್‌ಗಳನ್ನು ನಿಯೋ ಜಿಸಲಾಗಿದೆ. ಸಂಯುಕ್ತ ಕಿಸಾನ್‌ (ಎಸ್‌ಕೆಎಂ) ನಾಯಕ ಸರ್ವನ್‌ ಸಿಂಗ್‌ ಪಂಧೇರ್‌ ಮಾತನಾಡಿ, ರೈತರ ಪ್ರಮುಖ 3 ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಿದ್ದೇವೆ. ಬುಧವಾರ ಬೆಳಗ್ಗೆ 11ಕ್ಕೆ ರ್ಯಾಲಿ ಆರಂಭಿಸುತ್ತಿದ್ದೇವೆ ಎಂದಿದ್ದಾರೆ. ಇತ್ತ ರೈತರ ದೆಹಲಿ ಪ್ರವೇಶದ ಕರೆ ಬೆನ್ನಲ್ಲೇ ರಾಜಧಾನಿಯಲ್ಲಿ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿದೆ.

ಮತ್ತೂಂದೆಡೆ ಅಶ್ರುವಾಯು, ರಬ್ಬರ್‌ ಬುಲೆಟ್‌ಗಳಿಂದ ತಪ್ಪಿಸಿಕೊಳ್ಳಲು ರೈತರು ಕಬ್ಬಿಣದ ಗುರಾಣಿ, ಸೆಣಬಿನ ಚೀಲಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ.
ವಿಶೇಷ ಅಧಿವೇಶನ ಕರೆಯಿರಿ: ಬೇಡಿಕೆಗಳ ಈಡೇರಿಸುವ ನಿರ್ಧಾರವನ್ನು ಪ್ರಧಾನಿ ಕೈಗೊಳ್ಳಬೇಕು. ಅವರಿಗೆ ಇಚ್ಛಾಶಕ್ತಿ ಇದ್ದರೆ ಕಾನೂನುಗಳನ್ನು ರೂಪಿಸಲು 1 ದಿನದ ಮಟ್ಟಿಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಿ ಎಂದು ಪಂಧೇರ್‌ ಹೇಳಿದ್ದಾರೆ.

ಎಲ್ಲರಿಗೂ ಮೂಲಭೂತ ಹಕ್ಕುಗಳಿದೆ ಆದರೆ, ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್‌-ಟ್ರಾಲಿಗಳಲ್ಲಿ ತೆರಳಿ ಪ್ರತಿಭಟಿಸುವುದು ಮೋಟಾರು ವಾಹನ ಕಾಯ್ದೆ ಪ್ರಕಾರ ತಪ್ಪು. ಹಕ್ಕುಗಳನ್ನು ಚಲಾಯಿಸುವಾಗ ಸಾಂವಿಧಾನಿಕ ಕರ್ತವ್ಯಗಳನ್ನು ಮರೆಯದಿರಿ ಎಂದು ಪಂಜಾಬ್‌ -ಹರ್ಯಾಣ ಕೋರ್ಟ್‌ ಮಂಗಳವಾರ ರೈತರಿಗೆ ಸೂಚನೆ ನೀಡಿದೆ. ಹೆದ್ದಾರಿಗಳಲ್ಲಿ ಹೆಚ್ಚಿನ ಜನರು ಸೇರದಂತೆ ಖಾತರಿ ಪಡಿಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿದೆ.

Latest Indian news

Popular Stories