5 ವರ್ಷದ ಮಗುವಿನ ಮೇಲೆ ಅತ್ಯಾಚಾರ, ಹತ್ಯೆ; ಆರೋಪಿಯನ್ನು ಗಲ್ಲಿಗೇರಿಸಲು ಆಗ್ರಹ

ಕೊಚ್ಚಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವ ಪ್ರಕರಣ ವರದಿಯಾಗಿದೆ.  5 ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರವೆಸಗಿ ಹತ್ಯೆಗೈದಿರುವ ಪೈಶಾಚಿಕ ಕೃತ್ಯ ವರದಿಯಾಗಿದ್ದು, ಮಗುವಿನ ಅಂತಿಮಯಾತ್ರೆಯನ್ನು ಭಾನುವಾರ ನಡೆಯಿತು. ಅಂತ್ಯಸಂಸ್ಕಾರದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು, ಆರೋಪಿಗೆ  ಮರಣದಂಡನೆ ವಿಧಿಸಲು ಆಗ್ರಹಿಸಿದ್ದಾರೆ.

ಎರ್ನಾಕುಲಂ ಜಿಲ್ಲೆಯ ಅಲುವಾದಲ್ಲಿ ಬಿಹಾರ ಮೂಲದ ವಲಸಿಗ ದಂಪತಿಯೊಬ್ಬರ 5 ವರ್ಷದ ಮಗು ಶುಕ್ರವಾರ ಮಧ್ಯಾಹ್ನ ನಾಪತ್ತೆಯಾಗಿತ್ತು. ಪ್ರಕರಣ ದಾಖಲಿಸಿ ಮಗುವಿಗಾಗಿ ಹುಡುಕಾಟ ನಡೆಸಲಾಗಿದೆ. ಆದರೆ, 20 ಗಂಟೆಗಳವರೆಗೆ ಮಗುವಿನ ಪತ್ತೆಯಾಗಿರಲಿಲ್ಲ.

ಬಳಿಕ ದಂಪತಿ ವಾಸವಿದ್ದ ಕಟ್ಟಡದಲ್ಲೇ, ವಾಸವಿದ್ದ ಬಿಹಾರ ಮೂಲದ ವಲಸಿಗನೊಬ್ಬನನ್ನು ಮಗುವಿನ ಅಪಹರಣದ ಶಂಕೆಯ ಮೇಲೆ ಪೊಲೀಸರು ಬಂಧಿಸಿದ್ದು, ಆತ ತಪ್ಪೊಪ್ಪಿಕೊಂಡ ಬಳಿಕ ಶನಿವಾರ ಮಧ್ಯಾಹ್ನದ ವೇಳೆಗೆ ಅಲುವಾ ಮಾರ್ಕೆಟ್‌ ಬಳಿ ಮಗುವಿನ ದೇಹ ರಕ್ತಸಿಕ್ತ ಸ್ಥಿತಿಯಲ್ಲಿ, ಪ್ಲಾಸ್ಟಿಕ್‌ ಕವರ್‌ ಒಂದರಲ್ಲಿ ಸುತ್ತಿಟ್ಟುರುವುದು ಪತ್ತೆಯಾಗಿದೆ. ಮಗುವಿನ ಮೇಲೆ ಅತ್ಯಾಚಾರವೆಸಗಿ, ಹತ್ಯೆಗೈದಿರುವುದು ತಿಳಿದುಬಂದಿದೆ.

ಆರೋಪಿಯು ಮಗುವಿಗೆ ಸಿಹಿ ಕೊಡಿಸುವುದಾಗಿ ಆಸೆ ತೋರಿಸಿ ಮಾರ್ಕೆಟ್‌ಗೆ ಕರೆದೊಯ್ದಿದ್ದಾನೆ. ಮಾರ್ಗಮಧ್ಯೆ ನೆರೆಮನೆಯವರು ವಿಚಾರಿಸಿದಾಗ ಇದು ತನ್ನದೇ ಮಗು, ಮಾರ್ಕೆಟ್‌ ತೋರಿಸುವುದಕ್ಕಾಗಿ ಕರೆದೊಯ್ಯುತ್ತಿರುವುದಾಗಿ ಹೇಳಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಕೃತ್ಯದಲ್ಲಿ ಬೇರೋಬ್ಬರು ಭಾಗಿಯಾಗಿರುವ ಶಂಕೆ ಇದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಕೊಲೆ ಪ್ರಕರಣದ ಜೊತೆಗೆ ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್‌ ದಾಖಲಿಸಲಾಗಿದೆ.  ಈ ಕುರಿತು ಕೇರಳದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿ, ಬಿಹಾರದ ವಲಸೆ ಕಾರ್ಮಿಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಂತ್ರಸ್ತ ಮಗುವಿನ ತಾಯಿ, ಪೋಷಕರು ಒತ್ತಾಯಿಸಿದ್ದಾರೆ.

Latest Indian news

Popular Stories