ಉತ್ತರ ಭಾರತದಲ್ಲಿ ಸೌರಾಘಾತದಿಂದ 68 ಮಂದಿ ದುರ್ಮರಣ; 1,300ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ: ಉತ್ತರ ಭಾರತ ದಲ್ಲಿ ಬಿಸಿಲಿನ ಹೊಡೆತಕ್ಕೆ ಜನರು ಅಕ್ಷರಶಃ ತತ್ತರಿಸುತ್ತಿದ್ದು, ಶುಕ್ರವಾರ 40 ಮಂದಿ ಸೌರಾಘಾತದಿಂದ ಮೃತಪಟ್ಟಿದ್ದಾರೆ. ಈ ಪೈಕಿ 25 ಮಂದಿ ಚುನಾವಣ ಸಿಬಂದಿಯೂ ಸೇರಿ ದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅವರನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ ಈವರೆಗೆ ಬಿಸಿಲಿನ ಝಳಕ್ಕೆ 68 ಮಂದಿ ಮೃತಪಟ್ಟಂತಾಗಿದೆ.

ವರದಿಗಳ ಪ್ರಕಾರ ಶುಕ್ರವಾರ ಮೃತಪಟ್ಟವರ ಪೈಕಿ 17 ಮಂದಿ ಉತ್ತರಪ್ರದೇಶ ದವರು. ಬಿಹಾರದಲ್ಲಿ 14, ಒಡಿಶಾದಲ್ಲಿ 5 ಮತ್ತು ಝಾರ್ಖಂಡ್‌ನ‌ಲ್ಲಿ 4 ಸಾವು ವರದಿಯಾಗಿವೆ. ಅಲ್ಲದೆ 1,300ಕ್ಕೂ ಅಧಿಕ ಮಂದಿ ಸೌರಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉತ್ತರ ಭಾರತದ ವಿವಿಧೆಡೆ ಮುಂದಿನ 3 ದಿನ ತಾಪಮಾನ ಇನ್ನಷ್ಟು ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ರಾಮಮಂದಿರ: ಬೇಸಗೆ ಆತಿಥ್ಯ
ಬಿರು ಬಿಸಿಲಿನ ನಡುವೆಯೂ ಅಯೋಧ್ಯೆಯ ರಾಮನ ದರ್ಶನಕ್ಕೆ ಬರುತ್ತಿರುವ ಭಕ್ತರಿಗಾಗಿ ದೇಗುಲ ಆಡಳಿತ ಮಂಡಳಿ ವಿಶೇಷ ಆತಿಥ್ಯ ಒದಗಿಸಲು ಮುಂದಾಗಿದೆ. ಇದರ ಭಾಗವಾಗಿ 500 ಮಂದಿ ವಿಶ್ರಮಿಸಬಲ್ಲ ಕೇಂದ್ರ ಸ್ಥಾಪಿಸಿರುವುದಾಗಿ ತಿಳಿಸಿದೆ. ಕೂಲರ್‌ಗಳನ್ನು ಅಳವಡಿಸಲಾಗಿದ್ದು ಒಆರ್‌ಎಸ್‌ ಕೂಡ ಒದಗಿಸಲಾಗುತ್ತಿದೆ.

ದೇಶಾದ್ಯಂತ ಬಿಸಿಲ ಬೇಗೆಗೆ ಜನರು ತತ್ತರಿಸುತ್ತಿದ್ದರೂ ಆಡಳಿತವು ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆ ಯಲ್ಲಿ ಸೌರಾಘಾತವು ರಾಷ್ಟ್ರೀಯ ತುರ್ತುಸ್ಥಿತಿ ಎಂಬುದಾಗಿ ಘೋಷಿಸಿ ಎಂದು ರಾಜಸ್ಥಾನ ಹೈಕೋರ್ಟ್‌ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.

Latest Indian news

Popular Stories