ಬೆಂಗಳೂರು : ಇದೇ ಮೊದಲ ಬಾರಿಗೆ ಆಯ್ಕೆಗೊಂಡ 70 ಶಾಸಕರಿಗೆ ಸಂಸದೀಯ ಕಲಾಪದ ಬಗ್ಗೆ ಅರಿವು ಮೂಡಿಸಲು ಜೂ.26ರಿಂದ 28ರ ವರೆಗೆ ಮೂರು ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೂತನ ಶಾಸಕರಿಗೆ ಆರೋಗ್ಯ ಸುಸ್ಥಿರತೆ ಮತ್ತು ಜ್ಞಾನಾಭಿವೃದ್ಧಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ. ಯುವ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಸದೀಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಉದ್ದೇಶದಿಂದ ಮತ್ತು ಯುವಜನರ ಆಲೋಚನೆಗಳು, ದೂರದೃಷ್ಟಿ, ಪ್ರತಿಭೆ ಬಿಂಬಿಸುವುದು ಇದರ ಉದ್ದೇಶ. ತರಬೇತಿ ಶಿಬಿರವನ್ನು ನೆಲಮಂಗಲದ ಸಮೀಪದ ಧರ್ಮಸ್ಥಳ ಕ್ಷೇಮವನದಲ್ಲಿ ನಡೆಸಲಾಗುತ್ತದೆ. ಈಗಾಗಲೇ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಮಾಹಿತಿ ನೀಡಲಾಗಿದ್ದು, ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಸಕ್ರಿಯವಾಗಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜೂ.25ರಂದು ಸಂಜೆ ಕ್ಷೇಮವನದಲ್ಲಿ ನೂತನ ಶಾಸಕರು ಆಗಮಿಸಿ ನೋಂದಣಿ ಮಾಡಿಕೊಳ್ಳಲಿದ್ದಾರೆ. ಜೂ.26ರಿಂದ ಮೂರು ದಿನಗಳ ಕಾಲ ಬೆಳಗ್ಗೆ 6 ರಿಂದ ಬೆಳಗ್ಗೆ 9ರವರೆಗೆ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲಿವೆ. ಬೆಳಗ್ಗೆ 10 ರಿಂದ ಸಂಜೆಯವರೆಗೆ ಹಿರಿಯ ಸದಸ್ಯರು ಶಿಬಿರದಲ್ಲಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಿದ್ದಾರೆ. ಜೂ.26ರಂದು ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಪಾಲ್ಗೊಳ್ಳಲಿದ್ದಾರೆ.
ಮೂರು ದಿನಗಳ ಕಾಲ ಪ್ರತಿದಿನ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ,ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನೂತನ ಶಾಸಕರ ಸಂವಾದ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
16ನೇ ವಿಧಾನಸಭೆಯ ಮೊದಲನೇ ಅಧಿವೇಶನ ಜು.3ರಿಂದ ಆರಂಭವಾಗಲಿದ್ದು, ಜು.14ರವರೆಗೆ 10ದಿನಗಳ ಕಾಲ ನಡೆಯಲಿದೆ. ಜು.3ರಂದು ಮಧ್ಯಾಹ್ನ 12ಕ್ಕೆ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.7ರಂದು ಆಯವ್ಯಯ ಮಂಡಿಸಲಿದ್ದು, ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ ನಡೆದ ನಂತರ ಅನುದಾನದ ಬೇಡಿಕೆಗಳನ್ನು ಅಂಗೀಕರಿಸಲಾಗುತ್ತದೆ ಎಂದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಳವಡಿಸಿರುವ ವೀರ ಸಾವರ್ಕರ್ ಫೋಟೋ ಭವಿಷ್ಯದಲ್ಲಿ ಇರುತ್ತದೆಯೋ, ಇಲ್ಲವೋ ಎಂಬ ಪ್ರಶ್ನೆಗೆ ಸ್ಪೀಕರ್ ಖಾದರ್ ಅತ್ಯಂತ ಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಹಿಂದೆ ಆಲೋಚನೆ ಮಾಡಿದರೆ ಹಿಂದಕ್ಕೆ ಹೋಗುತ್ತೇವೆ. ಮುಂದೆ ಆಲೋಚನೆ ಮಾಡಿದರೆ ಮುದೆ ಹೋಗುತ್ತೇವೆ. ಯಾವ ಫೋಟೋ ಎನ್ನುವುದು ಮುಖ್ಯವಲ್ಲ. ಸದನ ಚೆನ್ನಾಗಿ ನಡೆಯೋದು ಮುಖ್ಯ. ಹಿಂದೆ ವಿಧಾನಸಭೆ ಹೇಗಿರುತ್ತದೋ ಹಾಗೆಯೇ ಇರುತ್ತದೆ. ಫೋಟೋ ವಿಚಾರಗಳ ಬಗ್ಗೆ ಏಕೆ ಅಷ್ಟು ಆಸಕ್ತಿ ? ಅದರಿಂದ ಹೊಟ್ಟೆ ತುಂಬುವುದಿಲ್ಲ ಎಂದು ಅಭಿಪ್ರಾಯಪಟ್ಟರು.