ಕರ್ನಾಟಕದಿಂದ ದೆಹಲಿಗೆ ಪ್ರತಿಭಟನೆಗೆ ತೆರಳುತ್ತಿದ್ದ ಸುಮಾರು 70 ಮಂದಿ ರೈತರನ್ನು ಮಧ್ಯ ಪ್ರದೇಶದ ಭೋಪಾಲ್ ರೈಲು ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರು, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ತೆರಳುತ್ತಿದ್ದರು.
ಧಾರವಾಡ ಜಿಲ್ಲೆಯ 16 ರೈತರು ಕೂಡ ಇದರಲ್ಲಿ ಸೇರಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ (Kurubur Shanthakumar) ನೇತೃತ್ವದಲ್ಲಿ ರೈತರು ದೆಹಲಿಗೆ ತೆರಳುತ್ತಿದ್ದರು.
ದೆಹಲಿಯ ಜಂತರ್ ಮಂತರ್ನಲ್ಲಿ ಮಂಗಳವಾರ ಕಿಸಾನ್ ಮೋರ್ಚಾ ವತಿಯಿಂದ ಕಾರ್ಯಕ್ರಮ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸುವುದಕ್ಕಾಗಿ ರಾಜ್ಯದ ರೈತರು ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು ಮೂಲಕ ತೆರಳುತ್ತಿದ್ದರು.
ಸದ್ಯ ವಶಕ್ಕೆ ಪಡೆಯಲಾಗಿರುವ ರೈತರನ್ನು ಕಲ್ಯಾಣ ಮಂಟಪವೊಂದರಲ್ಲಿ ಇರಿಸಿಕೊಳ್ಳಲಾಗಿದೆ. ಅಲ್ಲಿಯೇ ‘ರೈತ ವಿರೋಧಿ ಮಧ್ಯಪ್ರದೇಶ ಪೊಲೀಸರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ.