ಬೆಂಗಳೂರು: ರಾಜ್ಯದಲ್ಲಿ ಮಲ ಹೊರುವ ಪದ್ಧತಿಗೆ ನಿಷೇಧವಿದ್ದರೂ 1993ರಿಂದ ಇಲ್ಲಿಯ ವರೆಗೆ ಒಟ್ಟು 47 ಪ್ರಕರಣಗಳು ದಾಖಲಾಗಿವೆ ಮಾತ್ರ ವಲ್ಲದೆ 92 ಮಂದಿ ಸಾವನ್ನಪ್ಪಿದ್ದಾರೆ. ವಿಪರ್ಯಾಸ ವೆಂದರೆ ಈವರೆಗೆ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ. ಮನುಷ್ಯರಿಂದ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ಉಲ್ಲಂಘನೆಯಡಿ 87 ಪ್ರಕರಣ ದಾಖಲಾಗಿದ್ದು, 6ರಲ್ಲಿ ಮಾತ್ರ ಶಿಕ್ಷೆಯಾಗಿದೆ.
ಇದು ರಾಜ್ಯ ಸರಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿ. ಈ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖ ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ವಿಭಾಗೀಯ ನ್ಯಾಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ತತ್ಸಂಬಂಧಿ ಅನುಪಾಲನ ವರದಿಯನ್ನು ದಾಖಲಿಸಿಕೊಂಡ ನ್ಯಾಯಪೀಠವು ಸರಕಾರ ಗಣನೀಯ ಪ್ರಮಾಣದಲ್ಲಿ ಕ್ರಮ ಕೈಗೊಂಡಿದೆ. ಆದರೆ ಪರಿಹಾರದ ವಿಚಾರದಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿತು.
ವರದಿಯಲ್ಲಿ ಏನಿದೆ?
– ಶೌಚ ಗುಂಡಿ ಸ್ವತ್ಛತೆ ವೇಳೆ ಮೃತಪಟ್ಟವರ ಅವಲಂಬಿತರಿಗೆ ನೀಡುವ ಪರಿಹಾರವನ್ನು 10 ಲಕ್ಷ ರೂ.ಗಳಿಂದ 30 ಲಕ್ಷ ರೂ.ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
-ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಈವರೆಗೆ 1,462 ಮಂದಿಗೆ 32.66 ಕೋಟಿ ರೂ. ಪರಿಹಾರ.
-ಮೃತರ ಮಕ್ಕಳಿಗೆ ಶಾಲಾ ಸಮವಸ್ತ್ರ, ಸ್ಕಾಲರ್‌ಶಿಪ್ ನೀಡುವಂತೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗವು ಸಮಾಜ ಕಲ್ಯಾಣ ಇಲಾಖೆಗೆ ಶಿಫಾರಸು ಮಾಡಿದೆ.
-ರಾಮನಗರ, ಬೆಂಗಳೂರು, ಕಲಬುರಗಿ, ಕೋಲಾರದಲ್ಲಿ ನಡೆದ ಘಟನೆಗಳಲ್ಲಿ ಮೃತರ ಕುಟುಂಬಕ್ಕೆ ಆರ್ಥಿಕ ನೆರವು, ಪರ್ಯಾಯ ಉದ್ಯೋಗಕ್ಕೆ ಕ್ರಮ ಕೈಗೊಳ್ಳಲಾಗಿದೆ.