ಪೊಲೀಸ್ ಠಾಣೆಯಲ್ಲೇ ಶಿವಸೇನಾ ನಾಯಕನ ಮೇಲೆ ಬಿಜೆಪಿ ಶಾಸಕನಿಂದ ಗುಂಡಿನ ದಾಳಿ

ಮುಂಬಯಿ: ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ಶಿವಸೇನೆ ಮುಖಂಡ ಮಹೇಶ್ ಗಾಯಕ್ವಾಡ್ ಮೇಲೆ ಬಿಜೆಪಿ ಶಾಸಕ ಗಣೇಶ್ ಗಾಯಕ್ವಾಡ್ ಗುಂಡು ಹಾರಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಮೀನು ವಿವಾದಕ್ಕೆ ಸಂಬಂಧಿಸಿ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರುವ ತನಕ ಹೋಗಿತ್ತು ಅದರಂತೆ ಇಬ್ಬರು ರಾಜಕಾರಣಿಗಳು ಪರಸ್ಪರ ದೂರು ನೀಡಲು ಹಿಲ್ ಲೈನ್ ಪೊಲೀಸ್ ಠಾಣೆಗೆ ತೆರಳಿದ್ದಾರೆ ಅಲ್ಲದೆ ಈ ವೇಳೆ ಇಬ್ಬರು ರಾಜಕಾರಣಿಗಳ ಬೆಂಬಲಿಗರೂ ಕೂಡ ಅಲ್ಲಿ ಸೇರಿದ್ದರು ಈ ನಡುವೆ ಎರಡು ಕಡೆಯವರ ನಡುವೆ ವಾಗ್ವಾದ ನಡೆಯಿತು ಮತ್ತು ಗಣೇಶ್ ಗಾಯಕ್ವಾಡ್ ಅವರು ಮಹೇಶ್ ಗಾಯಕ್ವಾಡ್ ಮೇಲೆ ನಾಲ್ಕು ಸುತ್ತಿನ ಗುಂಡುಗಳನ್ನು ಹಾರಿಸಿದ್ದಾರೆ ಅಲ್ಲದೆ ಘಟನೆಯಲ್ಲಿ ಶಿವಸೇನೆ ಶಾಸಕ ರಾಹುಲ್ ಪಾಟೀಲ್ ಕೂಡ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಗಾಯಗೊಂಡ ಇಬ್ಬರನ್ನು ಥಾಣೆಯ ಜುಪಿಟರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಗುಂಡು ಹಾರಿಸಿದ ಗಣಪತ್ ಗಾಯಕ್ವಾಡ್ ಅವರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ ಜೊತೆಗೆ ಅವರು ಬಳಸಿದ ಗನ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗಾಯಗೊಂಡ ಮಹೇಶ್ ಗಾಯಕ್ವಾಡ್ ಅವರನ್ನು ಮೊದಲು ಉಲ್ಲಾಸನಗರದ ಮೀರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ರಾತ್ರಿ 11 ಗಂಟೆಗೆ ಥಾಣೆಯ ಜುಪಿಟರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಜುಪಿಟರ್ ಆಸ್ಪತ್ರೆಯಲ್ಲಿ ಶಿವಸೇನೆ ನಾಯಕನ ಬೆಂಬಲಿಗರು ಜಮಾಯಿಸಿದ್ದು, ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಆಸ್ಪತ್ರೆ ಸುತ್ತ ಹೆಚ್ಚಿನ ಪೊಲೀಸ್ ಸಿಬಂದಿಗಳನ್ನು ನೇಮಕಗೊಳಿಸಿದ್ದಾರೆ.

Latest Indian news

Popular Stories