ಯುವಕನಿಗೆ ಚಾಕು ಇರಿತ ಪ್ರಕರಣ; ಬಿಜೆಪಿಯಿಂದ ಪ್ರತಿಭಟನೆ

ಶಿವಮೊಗ್ಗ: ಶಿಕಾರಿಪುರದಲ್ಲಿ ಹಿಂದೂ ಯುವಕನಿಗೆ ಚಾಕು ಇರಿತ ಪ್ರಕರಣ ಸಂಬಂಧಿಸಿದಂತೆ ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಯಿತು.

ಚಾಕು ಇರಿತ ಪ್ರಕರಣವನ್ನು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆದಿದ್ದು, ಸಂಸದ ಬಿ.ವೈ.ರಾಘವೇಂದ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದಾರೆ.
ಶಿಕಾರಿಪುರದ ಟೌನ್ ಪೊಲೀಸ್ ಠಾಣೆಯಲ್ಲಿ ಮುಂದೆ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಠಾಣೆಯ ಮೆಟ್ಟಿಲು ಬಳಿಯೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಮೂಲಕ ಬಿಜೆಪಿಗರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಬೈಕ್ ವೀಲಿಂಗ್ ಮಾಡುತ್ತಿದ್ದ ಯುವಕನಿಗೆ ಸುಶೀಲ್ ಬುದ್ಧಿವಾದ ಹೇಳಿದ್ದಾನೆ, ಈ ರೀತಿ ಮಾಡಬೇಡ ಎಂದು ತಿಳಿ ಹೇಳಿದ್ದಾನೆ. ಇದಾದ ನಂತರ ಆತ ವಾಕಿಂಗ್ ಮಾಡುತ್ತಿದ್ದಾಗ ಅಲ್ಲೇ ಈ ಘಟನೆ ನಡೆದಿದೆ. ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದ ಯುವಕ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದರು.

ಚಿಕ್ಕ ವಯಸ್ಸಿನಲ್ಲಿ ಈ ಯುವಕರು ಇಂತಹ ಕೃತ್ಯ ನಡೆಸಿದ್ದಾರೆ. ಚಾಕು ಹಾಕುವ ಮಟ್ಟಕ್ಕೆ ಬೆಳೆದಿದ್ದಾರೆ. ಜೀವನಪೂರ್ತಿ ತೊಂದರೆ ಎದುರಿಸುವ ರೀತಿಯಲ್ಲಿ ಚಾಕು ಹಾಕಿದ್ದಾರೆ. ಇದನ್ನು ನೋಡಿದರೆ ಆತನ ಮನಸ್ಥಿತಿ ಹೇಗಿರಬಹುದು ಎಂದು ಪ್ರಶ್ನಿಸಬೇಕಾಗುತ್ತದೆ ಎಂದರು.
ಸಣ್ಣಪುಟ್ಟ ವಿಚಾರಕ್ಕೂ ಚಾಕು ಹಾಕುವ ಮಟ್ಟಕ್ಕೆ ಯುವಕರು ಬೆಳೆದಿದ್ದಾರೆ. ಕೆಲವೇ ದಿನಗಳ ಹಿಂದೆ ಮುಸ್ಲಿಂ ಯುವಕರ ನಡುವೆಯೇ ಹೊಡೆದಾಟ ನಡೆದು ಕೊಲೆಯಲ್ಲಿ ಅಂತ್ಯಗೊಂಡಿತ್ತು. ಉರೂಸ್ ಕಾರ್ಯಕ್ರಮದ ಆಯೋಜನೆ ವೇಳೆ ಗಲಾಟೆ ನಡೆದಿತ್ತು. ಶಿರಾಳಕೊಪ್ಪ ಪಟ್ಟಣದಲ್ಲೂ ಇಂತಹದೇ ಘಟನೆ ನಡೆದಿತ್ತು ಎಂದು ನೆನಪಿಸಿಕೊಂಡು ಹೇಳಿದರು.
ಪೊಲೀಸರು ಇಂತಹ ಕಥೆಗಳು ನೋಡಿಕೊಂಡು ಸುಮ್ಮನೆ ಕುಳಿತಿದ್ದಾರೆ. ಸರ್ಕಾರದ ತುಷ್ಟೀಕರಣ ನೀತಿಯನ್ನು ಬೆಂಬಲಿಸುತ್ತಿದ್ದಾರೆ. ಇದು ಯಡಿಯೂರಪ್ಪರಂತ ಹೋರಾಟಗಾರರು ಇರುವ ಊರು, ಗೌರವಯುತ ರಾಜಕಾರಣವನ್ನು ಮಾಡಿಕೊಂಡು ಬರುತ್ತಿರುವ ಕ್ಷೇತ್ರ ಎಂದ ಅವರು, ಈ ಘಟನೆಯಿಂದ ಪಟ್ಟಣದ ಜನರು ಆತಂಕದಲ್ಲಿದ್ದಾರೆ ಎಂದರು.

ಪಟ್ಟಣದಲ್ಲಿ ಇನ್ನೆರಡು ದಿನಗಳಲ್ಲಿ ಮಾರಿ ಜಾತ್ರೆ ನಡೆಯಲಿದೆ. ಅದನ್ನು ಹಾಳಾಗಡವಲೆಂದೇ ಯಾರೋ ಇಂತಹ ಕೃತ್ಯ ನಡೆಸುತ್ತಿದ್ದಾರೆ. ಕೃತ್ಯ ನಡೆಸಿರುವ ಮುಸ್ಲಿಂ ಯುವಕರ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಿದರು.

ಘಟನೆ ನಡೆದ ಒಂದೆರಡು ಗಂಟೆಯಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಸಣ್ಣ ವಯಸ್ಸಿನ ಯುವಕರ ಮನಸ್ಸಿನಲ್ಲಿ ದ್ವೇಷದ ಭಾವನೆ ಬೆಳೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣವೇ ಇದಕ್ಕೆ ಕಾರಣ ಎಂದ ಅವರು, ಇನ್ನು ಎಷ್ಟು ಜನ ಹಿಂದೂ ಕಾರ್ಯಕರ್ತರು ಸಾವನ್ನು ನೋಡಬೇಕಾಗಿದೆ ಎಂದು ಪ್ರಶ್ನಿಸಿದರು.

ದೇಶಕ್ಕಾಗಿ ಹೋರಾಡುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಮಾಡುವ ಕೆಲಸ ಮುಂದುವರಿದಿದೆ. ಮುಸ್ಲಿಂ ಯುವಕರು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು, ಇಲ್ಲದಿದ್ದರೆ ಅವರಿಗೆ ಸರಿಯಾದ ಪಾಠ ಕಲಿಸುವ ದಿನ ದೂರವಿಲ್ಲ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ ಗಳನ್ನು ಹಾಕಬೇಕು. ಕೃತ್ಯದಲ್ಲಿ ಭಾಗವಹಿಸಿರುವ ಬಾಲಾಪರಾಧಿಗೂ ಕಠಿಣ ಶಿಕ್ಷೆ ಆಗಬೇಕು. ಮುಂದೆ ಆತ ಇಂತಹ ಕೃತ್ಯದಲ್ಲಿ ಭಾಗವಹಿಸಬಾರದು ಎಂದ ಅವರು, ಪಟ್ಟಣದಲ್ಲಿ ಮಾರಿಹಬ್ಬ ಶಾಂತಿಯುತವಾಗಿ ನಡೆಯಬೇಕಿದೆ, ಹಾಗಾಗಿ ಪಕ್ಷದ ಕಾರ್ಯಕರ್ತರು ತಾಳ್ಮೆಯಿಂದ ಇರಬೇಕು ಎಂದು ಹೇಳಿದರು.

Latest Indian news

Popular Stories