ಕೊಳವೆ ಬಾವಿಗೆ ಬಿದ್ದ ಮಗು ಸುರಕ್ಷಿತ: ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ಇಂಡಿ (ವಿಜಯಪುರ) : ಕೊಳವೆ ಬಾವಿಗೆ ಬಿದ್ದಿರುವ ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ.

16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ ಕೊರೆಯಲಾಗಿದ್ದು, 6 ಅಡಿ ಅಡ್ಡ ರಂದ್ರ ಮಾದರಿಯಲ್ಲಿ ಸುರಂಗ ಕೊರೆಯಲಾಗಿದೆ. ಸಾತ್ವಿಕ ಇರುವ ಸ್ಥಳ ತಲುಪಲು ಇನ್ನು ಅರ್ಧ ಅಡಿ ಮಾತ್ರ ಬಾಕಿ ಇದೆ.

ಆದರೆ ಸಾತ್ವಿಕ್ ಇರುವ ಸ್ಥಳಕ್ಕೆ ರಂದ್ರ ಕೊರೆಯುವ ಹಂತದಲ್ಲಿ ಮತ್ತೊಂದು ಕಲ್ಲು ಕಾಣಿಸಿಕೊಂಡಿದ್ದು, ಕಾರ್ಯಾಚರಣೆಗೆ ಕೊಂಚ ತೊಡಕಾಗಿದೆ. ಯಂತ್ರದಿಂದ ಸುರಕ್ಷಿತ  ಕೆಲಸ ಅಸಾಧ್ಯವಾದ ಕಾರಣ ಮಾನವಾಧಾರಿತ ಹಾರೆಯಿಂದ ಕಲ್ಲು ಒಡೆಯುವ ತಂತ್ರ ಅನುಸರಿಸಲಾಗುತ್ತಿದೆ. ಇದರಿಂದಾಗಿ ಕಾರ್ಯಾಚರಣೆ ಕೊಂಚ ವಿಳಂಬವಾಗಿದೆ. ಆದರೆ ಬಾಲಕ ಸಾತ್ವಿಕ ಸುರಕ್ಷಿತವಾಗಿದ್ದು, ಆಕ್ಸಿಜನ್ ಪೂರೈಕೆ ಮುಂದುವರೆದಿದೆ.16 ಅಡಿ ಆಳದಲ್ಲಿರುವ ಸಾತ್ವಿಕ ಕೆಳಗೆ ಕುಸಿಯದಂತೆ ಮೇಲಿನಿಂದ ಎರಡೂ ಕಾಲಿಗೆ ಹಗ್ಗ ಕಟ್ಟಿದ್ದು, ಒಂದು ಹಗ್ಗ ಸುರಕ್ಷಿತವಾಗಿ ಸಾತ್ವಿಕ್ ಸ್ಥಿರವಾಗಿ ಹಿಡಿದಿದೆ.

ಹೈದರಾಬಾದ್ ನಿಂದ ಬಂದಿರುವ ಎನ್.ಡಿ.ಆರ್.ಎಫ್. ತಂಡ ಹಾಗೂ ರಾಜ್ಯದ ಎಸ್.ಡಿ.ಅರ್.ಎಫ್. ತಂಡಗಳು ಬಾಲಕ ಸಾತ್ವಿಕನನ್ನು ಸುರಕ್ಷಿತವಾಗಿ ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿವೆ.ಬಾಲಕನನ್ನು ಸುರಕ್ಷಿತವಾಗಿ ಹೊರ ತೆಗೆಯುತ್ತಲೇ ತುರ್ತು ಆರೋಗ್ಯ ಸೇವೆ ನೀಡುತ್ತಲೇ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.ಬಾಲಕನ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಇಂಡಿ ತಾಲೂಕು ಆಡಳಿತ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಇರುವ ಸಕಲ ಸಿದ್ಧತೆಯೊಂದಿಗಿ ಇಡೀ ರಾತ್ರಿ ಸ್ಥಳದಲ್ಲೇ ಬೀಡು ಬಿಟ್ಟಿದೆ.

Latest Indian news

Popular Stories