ಪತ್ನಿ, ಮಕ್ಕಳನ್ನು ಕೊಂದು ಶವದೊಂದಿಗೆ ಮೂರು ದಿನ ಕಳೆದ ವ್ಯಕ್ತಿ

ಲಕ್ನೋ: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಜ್ಯೋತಿ(30) ಪಾಯಲ್ (6) ಮತ್ತು ಆನಂದ್ (3) ಕೊಲೆಗೀಡಾದವರು. ರಾಮ್ ಲಗಾನ್(32)  ಆರೋಪಿ ಪತಿ.

ರಾಮ್ ಲಗಾನ್ ಹಾಗೂ ಜ್ಯೋತಿ ವಿವಾಹವಾಗಿ ಏಳು ವರ್ಷಗಳಾಗಿತ್ತು. ಮದುವೆಯ ಬಳಿಕ ಇಬ್ಬರ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು. ರಾಮ್‌ ಲಗಾನ್ ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆ ಫೋನ್ ನಲ್ಲಿ ಮಾತನಾಡುವಾಗ ಆಕೆಯ ಮೇಲೆ ಕಣ್ಣಿಡುತ್ತಿದ್ದ. ಇದರಿಂದ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಮಾರ್ಚ್ 28ರ ರಾತ್ರಿಯೂ‌ ಇದೇ ವಿಚಾರವಾಗಿ ಜಗಳವಾಗಿತ್ತು. ಅದೇ ದಿನ ರಾತ್ರಿ ಜಗಳ ವಿಕೋಪಕ್ಕೆ ತಿರುಗಿದೆ. ಪರಿಣಾಮ ದುಪ್ಪಟ್ಟಾದಿಂದ ಪತ್ನಿಯ ಕುತ್ತಿಗೆ ಬಿಗಿದು, ಆ ಬಳಿಕ ಮಕ್ಕಳನ್ನು ಕೊಲೆಗೈದಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ (ದಕ್ಷಿಣ) ಟಿಎಸ್ ಸಿಂಗ್ ಹೇಳಿದ್ದಾರೆ.

ಲಕ್ನೋದ ಬಿಜ್ನೋರ್ ಪ್ರದೇಶದ ಸರವನ್ ನಗರ ಪ್ರದೇಶದಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಈ ಕೃತ್ಯವನ್ನು ರಾಮ್ ಲಗಾನ್ ವೆಸಗಿದ್ದಾನೆ.

ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿದ ಬಳಿಕ ಕೃತ್ಯ ಹೊರಗಡೆ ಗೊತ್ತಾಗಬಾರದೆನ್ನುವ ಕಾರಣದಿಂದ ಆರೋಪಿ ಮೂರು ದಿನಗಳ ಕಾಲ ಶವದೊಂದಿಗೆ ಮಲಗುತ್ತಿದ್ದ. ಮರುದಿನ ಬೆಳಗ್ಗೆ ಹೊರಗಡೆ ಹೋಗಿ ರಾತ್ರಿ ವಾಪಾಸಾಗುತ್ತಿದ್ದ. ಮೂರು ದಿನದ ಬಳಿಕ ಮನೆ ಮಾಲೀಕ ಏನೋ ಕೊಳತೆ ವಾಸನೆ ಬರುತ್ತಿದೆ ಎಂದು ಮನೆಯತ್ತ ಬಂದಾಗ ಬಾಗಿಲು ತೆರೆದಿತ್ತು, ಆಗ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.ತನ್ನ ಮನೆಯವರು ಹೋಳಿ ಆಚರಿಸಲು ಸಂಬಂಧಿಕರ ಮನೆಗೆ ಹೋಗಿದ್ದಾರೆ ಎಂದು ಆರೋಪಿ ರಾಮ್‌ ಲಗಾನ್‌ ಅಕ್ಕಪಕ್ಕದವರ ಬಳಿ ಹೇಳಿದ್ದ. ಮಾಹಿತಿ ಪಡೆದ ಖಾಕಿ ಆರೋಪಿಯನ್ನು ಬಂಧಿಸಿದ್ದು, ಆತ ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Latest Indian news

Popular Stories