ಮನುಷ್ಯರನ್ನು ಮನುಷ್ಯರಂತೆ ಕಾಣದ ಪುರಾಣ, ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ – ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್

ರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನೊಬ್ಬನಿಗೆ ಹುಟ್ಟಿರುವುದು. ಮಹಾಭಾರತದ ಪಾಂಡವ ಸಹೋದರರು ಹುಟ್ಟಿದ್ದು ದೇವತೆಗಳಿಂದ. ಈ ಮಾತಿಗೆ ನನ್ನ ಬಳಿ ಪುರಾವೆಗಳಿವೆ ಎಂದು ವಿವಾದಾತ್ಮಕ ಸಾಹಿತಿ, ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಹೇಳಿದ್ದಾರೆ.

ನಗರದ ಹೊರವಲಯದ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಹಾಗೂ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮಾಯಣದ ರಾಮ ದಶರಥ ಮಹಾರಾಜರ ಮಗ ಎಂಬುದಷ್ಟೆ ತಿಳಿದ ವಿಷಯವಾದರೂ ರಾಮ ದಶರಥ ಮಹಾರಾಜರಿಂದ ಹುಟ್ಟಿಲ್ಲ, ಬದಲಾಗಿ ಪುರೋಹಿತನೊಬ್ಬನಿಂದ ಹುಟ್ಟಿದನು. ಅದೇ ರೀತಿ ಮಹಾಭಾರತದ ವಿಷಯಕ್ಕೆ ಬಂದರೆ, ಶಾಪಗ್ರಸ್ಥ ರಾಜ ಪಾಂಡು ಐವರು ಪಾಂಡವರ ತಂದೆ ಎಂದು ಹೇಳಲಾಗುತ್ತಿದ್ದರೂ ಪಾಂಡವರು ಹುಟ್ಟಿದ್ದು ಮಾತ್ರ ದೇವತೆಗಳಿಂದ ಎಂದು ಮಹಾಭಾರತದಲ್ಲೇ ಇದೆ’ ಎಂದರು.

ಪುರಾಣಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಪುರಾಣಗಳು ಹಾಗೂ ಮನುಸ್ಮೃತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿ, ಜನಾಂಗದವರನ್ನು ಶೂದ್ರರೆಂದು ಕರೆದಿವೆ. ಶೂದ್ರರೆಲ್ಲಾ ಬ್ರಾಹ್ಮಣರ ಸೇವಕರು ಎಂಬುದನ್ನು ಸಾರಿ ಹೇಳಿದೆ ಎಂದರು. ಮನುಷ್ಯರನ್ನು ಮನುಷ್ಯರಂತೆ ಕಾಣದ ಇಂತಹ ಪುರಾಣ, ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ, ಆದರೆ ಕೆಲವರು ಪುರಾಣ, ಮನುಸ್ಮೃತಿಯನ್ನು ತಲೆ ಮೇಲೆ ಹೊತ್ತು ಅದರ ಪ್ರಕಾರ ಆಡಳಿತ ನಡೆಸುತ್ತೇವೆಂದು ಕುಣಿಯುತ್ತಾರೆ ಎಂದು ಹೇಳಿದರು.

Latest Indian news

Popular Stories