ಕಾರವಾರ : ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರಜಾಪ್ರಭುತ್ವ ವಿರೋಧಿಗಳಿಂದ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬ ಸಾರ್ವಜನಿಕರ ಕೂಡಾ ಒಗ್ಗಟ್ಟಾಗಿ ಸ್ವಾತಂತ್ರö್ಯ ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಎತ್ತಿ ಹಿಡಿಯುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಅವರು ಭಾನುವಾರ ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಜಿಲ್ಲಾಡಳಿತ ಮತ್ತು ವಿವಿಧ ಸಂಘಟನೆ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತಂತೆ ಸುಳ್ಳು ಸಂದೇಶ ಸಾರುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ನಡೆಸುವ ಪ್ರಯತ್ನಗಳನ್ನು ಸಾರ್ವಜನಿಕರು ಒಗ್ಗಟ್ಟಾಗಿ ವಿರೋಧಿಸಬೇಕು. ಸಮಾನತೆ, ಗೌರವ, ಒಗ್ಗಟ್ಟು, ಸಾಮರಸ್ಯದಿಂದ ಜನತೆ ಜೀವಿಸಬೇಕು. ಪ್ರಜಾಪ್ರಭುತ್ವ ಮತ್ತು ಸಂವಿಧಾನ ನಮ್ಮ ಅತ್ಯಮೂಲ್ಯ ಆಸ್ತಿ ಎಂದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕುರಿತಂತೆ ಮುಂದಿನ ಜನಾಂಗಕ್ಕೆ ಅರಿವು ಮತ್ತು ಜಾಗ್ರತೆ ಮೂಡಿಸುವುದು ಅತ್ಯಗತ್ಯವಾಗಿದ್ದು ಶಾಲಾ ಕಾಲೇಜುಗಳಲ್ಲಿ ಪ್ರತಿ ದಿನ ಇವುಗಳ ಬಗ್ಗೆ ತಿಳಿಸುವ ಮೂಲಕ ಸುಭದ್ರ ದೇಶ ನಿರ್ಮಾಣ ಮಾಡಬೇಕು ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀ ಪ್ರಿಯಾ, ಜಿಲ್ಲೆಯಲ್ಲಿ ಹಳಿಯಾಳ ತಾಲ್ಲೂಕಿನ ಮಾವಿನಕೊಪ್ಪದಿಂದ ಭಟ್ಕಳ ತಾಲ್ಲೂಕಿನ ಗೋರಟೆವರೆಗೆ ಒಟ್ಟು 253 ಕಿಮೀ ಉದ್ದದ ಮಾನವ ಸರಪಳಿ ರಚಿಸಿದ್ದು, ಅರಣ್ಯ ಪ್ರದೇಶದಲ್ಲಿ ಮತ್ತು ಅಪಾಯಕಾರಿ ಗುಡ್ಡಕುಸಿತ ಪ್ರದೇಶದಲ್ಲಿ ವಾಹನಗಳಲ್ಲಿ ಧ್ವಜ ರ‍್ಯಾಲಿಯ ಮೂಲಕ ಸರಪಳಿಯನ್ನು ಜೋಡಿಸಲಾಗಿದ್ದು ಜಿಲ್ಲೆಯ 1 ಲಕ್ಷ ಕ್ಕೂ ಅಧಿಕ ಸಾರ್ವಜನಿಕರು ಈ ಕಾರ್ಯಾಕ್ರಮದಲ್ಲಿ ಭಾಗವಹಿಸಿದ್ದಾರೆ. ದೇಶದ ಪ್ರಜೆಗಳು ಶಾಂತಿ, ಸಮಾನತೆ, ಸಹಿಷ್ಣುತೆ, ಸೌಹಾರ್ದತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಹೋದರ ಸಹೋದರಿಯರಂತೆ ಬಾಳಬೇಕು ಎಂದರು.
ಮಾನವ ಸರಪಳಿಯಲ್ಲಿ ಪಾಲ್ಗೊಂಡ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಭಾರತವು ತನ್ನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಗತ್ತಿಗೆ ಮಾದರಿಯಾಗಿದೆ. ಪ್ರಜಾಪ್ರಭುತ್ವದ ಪ್ರತಿಯೊಂದು ಸೂತ್ರವು ನಮ್ಮ ರಾಷ್ಟçದ ಪ್ರಗತಿ ಮತ್ತು ಸೌಹಾರ್ದತೆಯ ಆಧಾರವಾಗಿದೆ ಎಂದರು.
ರಾಜ್ಯದಲ್ಲಿ ಕಳೆದ ವರ್ಷ “ಸಂವಿಧಾನ ಓದು” ಎಂಬ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದೇವೆ. ಈ ವರ್ಷ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಲು, ವಿಶೇಷವಾದ “ಮಾನವ ಸರಪಳಿ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.
ಹೊನ್ನಾವರದ ಗೇರುಸೊಪ್ಪ ಸರ್ಕಲ್ ಬಳಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ, ಡಾ.ಬಿ.ಆರ್ ಅಂಬೇಡ್ಕರ್, ಒನಕೆ ಓಬವ್ವ, ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ, ಭಾರತ ಮಾತೆಯ ವೇಷ ಧರಿಸಿದ್ದ ಪುಟಾಣಿಗಳು, ಹಾಲಕ್ಕಿ ವೇಷಧಾರಿಗಳು ಸಾರ್ವಜನಿಕರ ಗಮನ ಸೆಳೆದರು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಿತು.