ಬೆಂಗಳೂರು, ಮಾರ್ಚ 01: ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಟ್ರಾಫಿಕ್ ರೂಲ್ಸ್ ಬಗ್ಗೆ ಅರಿವು ಮೂಡಿಸುತ್ತಿದ್ದರೂ, ಕೆಲವರು ನಿಯಮಗಳನ್ನು ಉಲ್ಲಂಘನೆ (Traffic Rules Break) ಮಾಡುತ್ತಲೇ ಇರುತ್ತಾರೆ. ಆದರೆ ಇನ್ಮುಂದೆ ಇದು ನಡೆಯಲ್ಲ. ಇಷ್ಟು ದಿನಗಳ ಕಾಲ ಸಂಚಾರಿ ನಿಯಮ ಉಲ್ಲಂಘಿಸಿದವರ ಮನೆಗೆ ನೋಟಿಸ್ ಹೋಗುತ್ತಿತ್ತು. ನೋಟಿಸ್ ಬಂದರೂ ಹಲವರು ದಂಡ ಕಟ್ಟದೆ ತಕಾರಾರು ತೆಗೆಯುತ್ತಿದ್ದರು. ಇದರಿಂದ ಟ್ರಾಫಿಕ್ ಪೊಲೀಸರು (Traffic Police) ಕಿರಿಕಿರಿ ಅನುಭವಿಸುತ್ತಿದ್ದರು. ಆದರೆ ಮುಂದಿನ ದಿನಗಳಲ್ಲಿ ಸಂಚಾರಿ ಪೊಲೀಸರು ಹೈ ಟೆಕ್ನಾಲಜಿ ಬಳಸಿ ದಂಡ ವಸೂಲಿಗೆ ಮುಂದಾಗಿದ್ದಾರೆ.
ಹೌದು ದಂಡದ ನೋಟಿಸ್ ಜೊತೆಗೆ ಕ್ಯೂ ಆರ್ ಕೊಡ್ ಕೂಡ ಮನೆ ಬಾಗಲಿಗೆ ಬರಲಿದೆ. ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತಿದ್ದಂತೆ ನೀವು ಎಷ್ಟು ಬಾರಿ, ಎಲ್ಲೆಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂಬುವುದು ಗೊತ್ತಾಗಲಿದೆ. ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ನಿಯಮ ಉಲ್ಲಂಘನೆಯ ಫೋಟೋ ನಿಮ್ಮ ಮೊಬೈಲ್ನಲ್ಲಿ ಕಾಣಲಿದೆ. ಜೊತೆಗೆ ದಂಡ ಪಾವತಿಯ ಲಿಂಕ್ ಸಹ ನಿಮ್ಮ ಮೊಬೈಲ್ಗೆ ಬರಲಿದೆ.
ನಿಯಮ ಉಲ್ಲಂಘನೆಯ ಫೋಟೊ ಕಂಡ ಬಳಿಕವೂ ದೂರು ಇದ್ದಲ್ಲಿ ನೀವು ಸಂಚಾರಿ ಪೊಲೀಸ್ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ, ದೂರು ಸಲ್ಲಿಸಬಹುದು. ಸಂಚಾರಿ ಪೊಲೀಸ್ ಇಲಾಖೆ ವೆಬ್ ಸೈಟ್ Btp.gov.in.
ದೂರು/ ಸಲಹೆ ನೀಡುವುದು ಹೇಗೆ?
Btp.gov.in ವೆಬ್ಸೈಟ್ಗೆ ಭೇಟಿ ನೀಡಿದ ಬಳಿಕ ಮೇಲಗಡೆ ಬಲ ಭಾಗದಲ್ಲಿ Complain& Suggestions ಅಂತ ಕಾಣುತ್ತದೆ.
Complain& Suggestions ಮೇಲೆ ಕ್ಲೀಕ್ ಮಾಡಿದ ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
ಅಲ್ಲಿ ಯಾವ ಟ್ರಾಫಿಕ್ ಸಿಗ್ನಲ್ ದೂರು ಅಂತ ನಮೂದಿಸಬೇಕು. ಬಳಿಕ ಗಾಡಿ ಸಂಖ್ಯೆ, ಏನು ಸಮಸ್ಯೆ ಅಂತ ಬರಿಬೇಕು. ಬಳಿಕ ನಿಮ್ಮ ಹೆಸರು, ದೂರವಾಣಿ ಸಂಖ್ಯೆ, ಇಮೇಲ್ ಐಡಿ, ದೂರು ಬರೆದು ಸಬ್ಮಿಟ್ ಕೊಟ್ಟರೆ, ನಿಮ್ಮ ದೂರು ಸಂಚಾರಿ ಪೊಲೀಸರಿಗೆ ತಲಪುತ್ತದೆ.
ಆರ್.ಟಿ.ನಗರದ ಗಂಗಾನಗರ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಪೆಪ್ ಮೇಲೆ 2023ರ ಡಿಸೆಂಬರ್ನಲ್ಲಿ ಬರೊಬ್ಬರಿ 3.22ಲಕ್ಷ ದಂಡ ಬಿದ್ದಿತ್ತು. ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಮೇಲೆ 643 ಸಂಚಾರ ನಿಯಮ ಉಲ್ಲಂಘನೆ ಕೇಸ್ಗಳು ದಾಖಲಾಗಿದ್ದವು. ಸ್ಕೂಟಿ ಬೆಲೆಯೇ 70 ರಿಂದ 80 ಸಾವಿರ, ಆದರೆ ದಂಡದ ಮೊತ್ತ ನಾಲ್ಕು ಪಟ್ಟು ಹೆಚ್ಚಿದೆ. KA 04 KF9072 ನಂಬರ್ನ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸಿ ನಿಯಮ ಉಲ್ಲಂಘಿಸಿದ್ದರು