ಸ್ವಾತಂತ್ರ್ಯ ದಿನಾಚರಣೆ: ದೆಹಲಿಗೆ ಮಂಗಳೂರಿನ ವಿದ್ಯಾರ್ಥಿನಿ, ಶಿಕ್ಷಕಿ, ಗ್ರಾ.ಪಂ. ಅಧ್ಯಕ್ಷೆ ನಫೀಸಾಗೆ ಆಮಂತ್ರಣ

ಮಂಗಳೂರು: ಹೊಸದಿಲ್ಲಿಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಪಿಎಂಶ್ರೀ ಶಾಲೆಗಳ ನಾಲ್ವರು ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ವಿಶೇಷ ಅವಕಾಶ ಪಡೆದುಕೊಂಡಿದ್ದು, ಇದರಲ್ಲಿ ಮೈಸೂರು ಶೈಕ್ಷಣಿಕ ವಿಭಾಗದಿಂದ ದ.ಕ. ಜಿಲ್ಲೆಯ ಓರ್ವ ವಿದ್ಯಾರ್ಥಿನಿ ಹಾಗೂ ಶಿಕ್ಷಕಿಯೊಬ್ಬರಿಗೆ ಭಾಗವಹಿಸಲು ವಿಶೇಷ ಆಮಂತ್ರಣ ದೊರಕಿದೆ.

ದ.ಕ. ಜಿಲ್ಲೆಯ ಮಂಗಳೂರಿನ ಶಕ್ತಿನಗರ ನಾಲ್ಯಪದವು ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಸ.ಹಿ.ಪ್ರಾ. ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಯು. ಶೆಟ್ಟಿ ಹಾಗೂ ಶಿಕ್ಷಕಿ ಶ್ವೇತಾ ಕೆ. ಆಯ್ಕೆಯಾಗಿದ್ದಾರೆ.
ಪೂರ್ವಿ ಯು. ಅವರು ಶಕ್ತಿನಗರದ ಕಾರ್ಮಿಕ ಕಾಲನಿ ನಿವಾಸಿ ಉಮೇಶ್‌ ಶೆಟ್ಟಿ, ಗೀತಾ ಶೆಟ್ಟಿ ದಂಪತಿಯ ಪುತ್ರಿ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾನ್ವಿತೆಯಾಗಿರುವ ಈಕೆಯನ್ನು ಸಮಾರಂಭದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಆಯ್ಕೆ ಮಾಡಲಾಗಿದೆ.

ಕಲಬುರಗಿ, ಬೆಂಗಳೂರು, ಬೆಳಗಾವಿ, ಮೈಸೂರು ಶೈಕ್ಷಣಿಕ ವಿಭಾಗದಿಂದ ಒಟ್ಟು 8 ಮಂದಿ ರಾಜ್ಯವನ್ನು ಪ್ರತಿನಿಧಿಸಿ ದಿಲ್ಲಿಯ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ದೆಹಲಿಯ ಕೆಂಪುಕೋಟೆಯಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲು ಕರ್ನಾಟಕದ 6 ಪಂಚಾಯತ್‌ ಮಹಿಳಾ ಅಧ್ಯಕ್ಷರನ್ನು ಆಹ್ವಾನಿಸಲಾಗಿದ್ದು, ದ.ಕ.ಜಿಲ್ಲೆಯ ಪೆರುವಾಯಿ ಗ್ರಾಮ ಪಂ. ಅಧ್ಯಕ್ಷೆ ನೆಫೀಸಾ ಅವರನ್ನು ಆಯ್ಕೆ ಮಾಡಲಾಗಿದೆ.ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಇವರು ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದರು.ಉಪಾಧ್ಯಕ್ಷರಾಗಿದ್ದಾಗ ಅವರು ವಾಹನ ಚಲಾಯಿಸಿ ತ್ಯಾಜ್ಯ ಸಂಗ್ರಹಿಸಿ ವಿಶೇಷವಾಗಿ ಗುರುತಿಸಲ್ಪಟ್ಟಿದ್ದರು. ಅವರ ಈ ಸೇವೆಯನ್ನು ಗುರುತಿಸಿ ವರ್ಲ್ಡ್ ಯೂತ್‌ ಸ್ಕಿಲ್‌ ಡೇ ಅಂಗವಾಗಿ ಬೆಂಗಳೂರಿನಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಗೌರವಿಸಿದ್ದರು. ಪಂಚಾಯತ್‌ ವ್ಯಾಪ್ತಿಯ ರಸ್ತೆ, ಎಡಬ್ಲ್ಯೂಸಿ, ನರೇಗ ಇತ್ಯಾದಿ ಅಭಿವೃದ್ಧಿ ಯೋಜನೆಗಳಲ್ಲೂ ಅವರು ಶ್ರಮಿಸಿದ್ದಾರೆ. ಅವರು ಅನೇಕ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ಕೊಡುಗೆ ನೀಡಿದ್ದರು. ರಾಜ್ಯ ಇನ್‌ಸ್ಟಿಟ್ಯೂಟ್‌ ಆಫ್‌ ರೂರಲ್‌ ಡೆವೆಲಪ್‌ಮೆಂಟ್‌ ಇನ್‌ ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ನ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

Latest Indian news

Popular Stories