25 ವರ್ಷಗಳ ಹಿಂದೆ ಕಸದ ತೊಟ್ಟಿಗೆ ಎಸೆಯಲ್ಪಟ್ಟಿದ್ದ ದೃಷ್ಟಿ ಮಾಂದ್ಯ ಮಗು ಇಂದು MPSC ಪರೀಕ್ಷೆಯಲ್ಲಿ ಉತ್ತೀರ್ಣ | ಅವರ ಸಾಧನೆಗೆ ನಮ್ಮ ಸಲಾಮ್

ಅಮರಾವತಿ: ಇಪ್ಪತ್ತೈದು ವರ್ಷಗಳ ಹಿಂದೆ ದೃಷ್ಟಿದೋಷವುಳ್ಳ ಹೆಣ್ಣು ಶಿಶುವನ್ನು ಮಹಾರಾಷ್ಟ್ರದ ಜಲಗಾಂವ್ ರೈಲ್ವೆ ನಿಲ್ದಾಣದಲ್ಲಿ ಕಸದ ಬುಟ್ಟಿಗೆ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಆಕೆಯ ಹೆತ್ತವರು ಪತ್ತೆಯಾಗದ ಕಾರಣ, ಪೋಲಿಸರು ನಿಶ್ಚೇಷ್ಟಿತ, ಹಸಿವಿನಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ಜಲಗಾಂವ್‌ನ ರಿಮ್ಯಾಂಡ್ ಹೋಮ್‌ಗೆ ಕರೆದೊಯ್ದರು. ಅಲ್ಲಿ ಆಕೆಗೆ ಆಶ್ರಯ ನೀಡಲಾಯಿತು. 270 ಕಿಮೀ ದೂರದಲ್ಲಿರುವ ಅಮರಾವತಿಯ ಪರತ್ವಾಡದಲ್ಲಿ ಕಿವುಡ ಮತ್ತು ದೃಷ್ಟಿ ಮಾಂದ್ಯ ಮಕ್ಕಳ ಉತ್ತಮವಾದ ಸುಸಜ್ಜಿತ ಪುನರ್ವಸತಿ ಮನೆಗೆ ಸ್ಥಳಾಂತರಿಸಲಾಯಿತು.

ಅಲ್ಲಿ ಆಕೆಗೆ ಮಾಲಾ ಪಾಪಲ್ಕರ್ ಎಂದು ಹೆಸರಿಸಲಾಯಿತು. ಅವರು ಎರಡು ದಶಕಗಳ ನಂತರ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ (MPSC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮುಂಬೈನ ಮಹಾರಾಷ್ಟ್ರ ಸೆಕ್ರೆಟರಿಯೇಟ್ – ಗುಮಾಸ್ತ-ಕಮ್-ಟೈಪಿಸ್ಟ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಗುರುವಾರ ಫಲಿತಾಂಶ ಪ್ರಕಟವಾಗಿದೆ.

ಮಾಲಾ ಅವರ ಮಾರ್ಗದರ್ಶಕ ಮತ್ತು ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರಾದ 81 ವರ್ಷದ ಶಂಕರಬಾಬಾ ಪಾಪಲ್ಕರ್ ಅವರು ಅವರಿಗೆ ತಮ್ಮ ಸರ್ ನೇಮ್ ನೀಡಿದ್ದಾರೆ. ಆದರೊಂದಿಗೆ ಅವರ ಪ್ರತಿಭೆಯನ್ನು ಪೋಷಿಸಿದರು. ಬ್ರೈಲ್ ಲಿಪಿಯಲ್ಲಿ ಶಿಕ್ಷಣ ಕೊಡಿಸಿದರು.

ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಮಾಲಾ, “ದೇವರು ನನ್ನನ್ನು ರಕ್ಷಿಸಲು ದೇವಚರರನ್ನು ಕಳುಹಿಸಿದ್ದ. ನಾನು ಇಲ್ಲಿಗೆ ನಿಲ್ಲುವುದಿಲ್ಲ. ನಾನು UPSC ಪರೀಕ್ಷೆಗಳಿಗೆ ಕುಳಿತು ಐಎಎಸ್ ಅಧಿಕಾರಿಯಾಗುತ್ತೇನೆ” ಎಂದು ಉತ್ಸಾಹದಿಂದ ಹೇಳಿದ್ದಾರೆ.

ಶಂಕರಬಾಬಾ ಅವರ ಪ್ರಕಾರ, ಮಾಲಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಅಂಧರ ಶಾಲೆಯಲ್ಲಿ ಮುಗಿಸಿದರು. ಹೈಯರ್ ಸೆಕೆಂಡರಿಯನ್ನು ಪ್ರಥಮ ವಿಭಾಗದಲ್ಲಿ ಉತ್ತೀರ್ಣರಾದರು. ಅವರು ಅಮರಾವತಿ ವಿಶ್ವವಿದ್ಯಾನಿಲಯದಿಂದ 2018 ರಲ್ಲಿ ಪದವಿ ಪಡೆದರು. ಸರ್ಕಾರಿ ವಿದರ್ಭ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಹ್ಯುಮಾನಿಟೀಸ್ನಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ‌.

Latest Indian news

Popular Stories