ದೆಹಲಿ, ಗುಜರಾತ್, ಗೋವಾ, ಹರಿಯಾಣದಲ್ಲಿ ಲೋಕಸಭೆ ಸೀಟು ಹಂಚಿಕೆ ಘೋಷಿಸಿದ ಎಎಪಿ-ಕಾಂಗ್ರೆಸ್

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಪಾಲುದಾರರಾಗಿರುವ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ) ಸೀಟು ಹಂಚಿಕೆ ಕುರಿತು ಘೋಷಿಸಿದ್ದು, ದೆಹಲಿಯಲ್ಲಿ ಎಎಪಿ 4 ಮತ್ತು ಕಾಂಗ್ರೆಸ್ 3 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಉಭಯ ಪಕ್ಷಗಳು ಶನಿವಾರ ತಿಳಿಸಿವೆ.

ದೆಹಲಿಯಲ್ಲಿ ಏಳು ಲೋಕಸಭಾ ಕ್ಷೇತ್ರಗಳಿದ್ದು, 2019ರ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ.

ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್, ಎಎಪಿ ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದರೆ, ತಮ್ಮ ಪಕ್ಷ ಚಾಂದಿನಿ ಚೌಕ್, ಈಶಾನ್ಯ ದೆಹಲಿ ಮತ್ತು ವಾಯುವ್ಯ ದೆಹಲಿ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು.

‘ಗುಜರಾತ್‌ನಲ್ಲಿ ಎಎಪಿಯು ಭರೂಚ್ ಮತ್ತು ಭಾವನಗರದಿಂದ ಸ್ಪರ್ಧಿಸಲಿದ್ದು, ರಾಜ್ಯದಲ್ಲಿ ಉಳಿದ 24 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಹರಿಯಾಣದ 10 ಕ್ಷೇತ್ರಗಳ ಪೈಕಿ ಎಎಪಿ ಕುರುಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದರೆ, ಉಳಿದೆಡೆ ಕಾಂಗ್ರೆಸ್ ಸ್ಪರ್ಧಿಸಲಿದೆ. ಗೋವಾದಲ್ಲಿ ಕಾಂಗ್ರೆಸ್ ಎರಡೂ ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ’ ಎಂದು ಅವರು ಹೇಳಿದರು.

ಚಂಡೀಗಢದ ಏಕೈಕ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿದೆ ಎಂದು ವಾಸ್ನಿಕ್ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ

ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಆಪ್ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿವೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸಂದೀಪ್ ಪಾಠಕ್ ಹೇಳಿದ್ದಾರೆ.

ಎರಡು ಪಕ್ಷಗಳು ವಿಭಿನ್ನ ಚುನಾವಣಾ ಚಿಹ್ನೆಗಳ ಮೇಲೆ ಹೋರಾಡುತ್ತಿದ್ದರೂ, ದೆಹಲಿಯ ಎಲ್ಲಾ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಲು ಒಟ್ಟಾಗಿ ಕೆಲಸ ಮಾಡುತ್ತವೆ ಎಂದು ವಾಸ್ನಿಕ್ ಹೇಳಿದರು.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ರೂಪಿಸಿರುವ ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳಿವೆ.

ಎಎಪಿ ಈಗಾಗಲೇ ಗುಜರಾತ್‌ನ ಭರೂಚ್ ಮತ್ತು ಭಾವನಗರ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

‘ಇಂದು ದೇಶಕ್ಕೆ ಬಲಿಷ್ಠ ಪರ್ಯಾಯದ ಅಗತ್ಯವಿದೆ. ದೇಶದ ಹಿತದೃಷ್ಟಿಯಿಂದ ಈ ಮೈತ್ರಿಯನ್ನು ರಚಿಸಲಾಗಿದೆ. ಈ ಚುನಾವಣೆಯನ್ನು ಇಂಡಿಯಾ ಮೈತ್ರಿಕೂಟದಿಂದಲೇ ಎದುರಿಸಲಾಗುವುದು. ಮೈತ್ರಿಯಿಂದಾಗಿ ಬಿಜೆಪಿಯ ಲೆಕ್ಕಾಚಾರಗಳು ತಪ್ಪಾಗುತ್ತವೆ’ ಎಂದು ಪಾಠಕ್ ಹೇಳಿದರು.

Latest Indian news

Popular Stories