ಬೆಂಗಳೂರು: ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಕರ್ನಾಟಕ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ರಾಹುಲ್ ಗಾಂಧಿ ಇಂದು 42ನೇ ಎಸಿಎಂಎಂ ಕೋರ್ಟ್ ಗೆ ವಿಚಾರಣೆಗೆ ಖುದ್ಧ ಹಾಜರಾಗಿದ್ದರು. ಈ ವೇಳೆ ಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಜಾಮೀನು ಬಾಂಡ್ ಗೆ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಅಂತೆಯೇ ನ್ಯಾಯಾಲಯ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿಕೆ ಮಾಡಿದೆ ಎಂದು ತಿಳಿದುಬಂದಿದೆ.
ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಸ್.ಕೇಶವಪ್ರಸಾದ್ ಈ ಸಂಬಂಧ ಸಲ್ಲಿಸಿರುವ ಖಾಸಗಿ ದೂರನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ‘ದ 42ನೇ ಎಸಿಎಂಎಂ ಕೋರ್ಟ್ ವಿಚಾರಣೆಗೆ ಅಂಗೀರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಕಳೆದ ವಿಚಾರಣೆಗಳಲ್ಲಿ ಖುದ್ದು ಹಾಜರಿಯಿಂದ ವಿನಾಯ್ತಿ ಪಡೆದಿದ್ದ ರಾಹುಲ್ ಬೆಳಗ್ಗೆ 10.50ಕ್ಕೆ ಕೋರ್ಟ್ ಗೆ ಹಾಜರಾದರು. ವಿಚಾರಣೆ ಮುಕ್ತಾಯವಾಗುತ್ತಲೇ ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ವಿಚಾರಣೆ ಮುಗಿಸಿ ವಾಪಸ್ ತೆರಳಿದ್ದಾರೆ.
ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಆರೋಪಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಕ್ರಮವಾಗಿ 2, 3 ಮತ್ತು 4ನೇ ಆರೋಪಿಗಳಾಗಿದ್ದಾರೆ