ಕಟ್ಟಡ ಕಾರ್ಮಿಕ ಮಕ್ಕಳ ಶಿಷ್ಯವೇತನ ಮಂಜೂರಾತಿಗೆ ಕ್ರಮ: ಸಚಿವ ಸಂತೋಷ ಲಾಡ್

B 3 Featured Story, State News, Vijayapura
ವಿಜಯಪುರ: ಕಟ್ಟಡ ಕಾರ್ಮಿಕ ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿಗಾಗಿ ಸ್ಟೇಟ್ ಸ್ಕಾಲರ್ಶಿಪ್ ಪೋರ್ಟಲ್ನಲ್ಲಿ ಬಹಳಷ್ಟು ಅರ್ಜಿಗಳು ಸ್ವೀಕೃತವಾಗಿದ್ದು, ಮುಂದಿನ ದಿನಗಳಲ್ಲಿ ಶಿಷ್ಯವೇತನ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಕಾರ್ಮಿಕ ಖಾತೆ ಸಚಿವರಾದ ಸಂತೋಷ ಲಾಡ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿಗಾಗಿ ಈಗಾಗಲೇ ಪೋರ್ಟಲ್ ಮೂಲಕ ಅರ್ಜಿಗಳು ಸ್ವೀಕೃತವಾಗಿದ್ದು, ನೈಜ ಫಲಾನುಭವಿಗಳಿಗೆ ಶಿಷ್ಯವೇತನ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಸೂಕ್ತ ಪರಿಶೀಲನೆ ನಡೆಸಿ 7 ಲಕ್ಷ ಅರ್ಹರಿಗೆ ಶಿಷ್ಯವೇತನ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಕಾರ್ಮಿಕರು, ಕಾರ್ಮಿಕ ಸಂಘಟನೆಗಳು ಮನವಿ ತಮ್ಮ ದೂರು-ಮನವಿ ಸಲ್ಲಿಸಿ, 2022-23ನೇ ಸಾಲಿನಲ್ಲಿ ಮಕ್ಕಳ ಶೈಕ್ಷಣಿಕ ಸಹಾಯಧನ ಒದಗಿಸಬೇಕು. ಕಟ್ಟಡ ಕಾರ್ಮಿಕ ಸೆಸ್ ಆಕರಣೆಗೆ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ಒದಗಿಸಬೇಕು. ಕೆಲ ಕಾರ್ಮಿಕರು ಪ್ರತಿನಿತ್ಯ ಬೇರೆ ಬೇರೆ ಕಡೆಗಳಲ್ಲಿ ಕೂಲಿ ಕೆಲಸಕ್ಕೆ ಹೋಗುವುದರಿಂದ ವೇತನ ಚೀಟಿ, ಹಾಜರಾತಿ ನೀಡುವುದು ಕಷ್ಟವಾಗಿರುವುದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಒಕ್ಕೂಟ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಬೇಕು. ಚಾಲಕರ ಸಂಘ ಅಸಂಘಟಿತವಾಗಿದ್ದು, ಸಂಘಟಿತ ವಲಯಕ್ಕೆ ಸೇರಿಸಬೇಕು. ಚಾಲಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ಸಾಲ-ಸೌಲಭ್ಯ, ವಿದ್ಯಾರ್ಥಿವೇತನ ಒದಗಿಸಬೇಕು. ಪ್ರತಿ ಜಿಲ್ಲಾ ತಾಲೂಕಾ ಗ್ರಾಮ ಮಟ್ಟದಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಉಚಿತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಒದಗಿಸುವುದು ಸೇರಿದಂತೆ ಹಲವು ಮನವಿಗಳನ್ನು ಸಚಿವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಮೊದಲಿದ್ದ ಕಾರ್ಮಿಕ ಬಂಧು ಹೊಸ ವ್ಯವಸ್ಥೆ ಅಳವಡಿಸಿ ಪರಿಶೀಲಿಸಿ ಅರ್ಹ ಫಲಾನುಭವಿಗಳ ಮಕ್ಕಳಿಗೆ ಶಿಷ್ಯವೇತನ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ಕಾರ್ಮಿಕ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮದುವೆ ಸಹಾಯಧನ, ಹೆರಿಗೆ ಸಹಾಯಧನ, ಹೆರಿಗೆ ಭತ್ಯೆ ನೀಡುವಾಗ ನೈಜ ಫಲಾನುಭವಿಗಳ ಪರಿಶೀಲನೆ ಮಾಡಿ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದ ನೈಜ ಫಲಾನುಭವಿಗಳಿಗೆ ಲಾಭ ದೊರೆಯಲು ಸಹಕಾರಿಯಾಗುತ್ತದೆ. ಗೃಹ ಕಾರ್ಮಿಕರಾದ ಗಾರ್ಡನರ್, ಮನೆಗೆಲಸ ಮಾಡುವವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟು 45 ಲಕ್ಷ ಕಟ್ಟಡ ಕಾರ್ಮಿಕ ಕಾರ್ಡ್ಗಳಿದ್ದು, ಜಿಲ್ಲೆಯಲ್ಲಿ 2ಲಕ್ಷಕ್ಕೂ ಹೆಚ್ಚು ಕಾರ್ಮಿಕ ಕಾರ್ಡಗಳಿವೆ. ಕಟ್ಟಡ ಕಾರ್ಮಿಕರಾಗಿ ನೊಂದಾಯಿಸಿಕೊಳ್ಳಬೇಕಾದರೆ ವರ್ಷದಲ್ಲಿ 90 ದಿವಸಗಳವರೆಗೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವುದು ನಿಯಮವಿದೆ. ಅದರ ಹೊರತಾಗಿಯೂ ಹಲವಾರು ಜನರು ಕಟ್ಟಡ ಕಾರ್ಮಿಕರಾಗಿ ನೊಂದಾಯಿಸಿಕೊಂಡು ಕಾರ್ಡಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಬೋಗಸ್ ಕಾರ್ಡಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಕಟ್ಟಡ ಕಾರ್ಮಿಕರಲ್ಲದವರನ್ನು ಪತ್ತೆ ಹಚ್ಚಿ ಕಾರ್ಡಗಳನ್ನು ರದ್ದುಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ಮ್ಯಾಕ್ಸಿಕ್ಯಾಬ್, ಅಟೋ ಸ್ಟಾö್ಯಂಡ್ ಸೇರಿದಂತೆ ಪ್ರತ್ಯೇಕವಾಗಿ ಪಾರ್ಕಿಂಗ್ಗೆ ಸ್ಥಳಾವಕಾಶ ಕಲ್ಪಿಸಲು ಸೂಕ್ತ ವ್ಯವಸ್ಥೆಗೆ ಜಾಗೆ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ ಅವರು, ಲ್ಯಾಪಟಾಪ್ ವಿತರಣೆಯಲ್ಲಿ ನೈಜ್ ಫಲಾನುಭವಿಗಳಿಗೆ ಗುರುತಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕ ಯೋಜನೆ ರೂಪಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಆದಾಯ ಕ್ರೋಢೀಕರಣ ಮಾಡುವ ದಿಸೆಯಲ್ಲಿ ಗ್ರಾಮ ಪಂಚಾಯತ್, ತಾಲೂಕ ಪಂಚಾಯತ್, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಸೆಸ್ನ್ನು ಹೆಚ್ಚು ಕ್ರೋಢಿಕರಿಸಬೇಕು ಇದರಿಂದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಸೆಸ್ನ್ನು ಆಕರಿಸಲು ಸಹ ಕ್ರಮ ವಹಿಸಲಾಗುತ್ತಿದ್ದು, ನೈಜ ಕಾರ್ಮಿಕರು ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಲಾಭ ಪಡೆಯಲು ಯಾವುದೇ ಮಧ್ಯವರ್ತಿಗಳ ಮೊರೆಹೋಗದೇ ನೇರವಾಗಿ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಆಯುಕ್ತರಾದ ಗೋಪಾಲ ಕೃಷ್ಣ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಕಾರ್ಯದರ್ಶಿ ಶ್ರೀಮತಿ ಭಾರತಿ, ಜಿಲ್ಲಾಧಿಕಾರಿ ಟಿ.ಭೂಬಾಲನ್ , ಕಾರ್ಮಿಕ ಇಲಾಖೆ ಅಧಿಕಾರಿ ಎಸ್.ಜಿ.ಖೈನೂರ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಮಿಕರು ಉಪಸ್ಥಿತರಿದ್ದರು.

Latest Indian news

Popular Stories