ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ನಾಯಕರಾಗಲಿದ್ದಾರೆ ಅಖಿಲೇಶ್ ಯಾದವ್

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಲೋಕಸಭೆಯಲ್ಲಿ ಪಕ್ಷದ ನಾಯಕರಾಗಲಿದ್ದು, ದೆಹಲಿಯಲ್ಲಿ ಈ ಪ್ರಕ್ರಿಯೆಗಳು ನಡೆಯಲಿವೆ ಎಂದು ಅವರ ಪಕ್ಷದ ಹಿರಿಯ ನಾಯಕರೊಬ್ಬರು ಶನಿವಾರ ತಿಳಿಸಿದ್ದಾರೆ.

ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ಅವರು ಪಿಟಿಐಗೆ ತಿಳಿಸಿದ್ದಾರೆ.

“ಲೋಕಸಭೆಯಲ್ಲಿ ಅಖಿಲೇಶ್ ಯಾದವ್ ಪಕ್ಷದ ನಾಯಕರಾಗುತ್ತಾರೆ ಎಂದು ತಿಳಿದುಬಂದಿದೆ. ಆದರೆ ಸಂಸದೀಯ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಔಪಚಾರಿಕತೆ ಇದೆ ಮತ್ತು ಇದು ದೆಹಲಿಯಲ್ಲಿ ನಡೆಯಲಿದೆ. ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ ಮತ್ತು ಲೋಕಸಭೆಯ ಹಂಗಾಮಿ ಸ್ಪೀಕರ್ ಆಯ್ಕೆ ಬಳಿಕ ಸಂಸದೀಯ ಪಕ್ಷದ ನಾಯಕರ ಆಯ್ಕೆಯ ಪ್ರಕ್ರಿಯೆ ನಡೆಯಲಿದೆ’ ಎಂದು ಅವರು ಹೇಳಿದ್ದಾರೆ.

ಅಖಿಲೇಶ್ ಯಾದವ್ ಅವರು ಮೈನ್‌ಪುರಿಯ ಕರ್ಹಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಚೌಧರಿ ಖಚಿತಪಡಿಸಿದ್ದಾರೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕನೌಜ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

Latest Indian news

Popular Stories