ನಮ್ಮ ಪಕ್ಷದ ಎಲ್ಲಾ ಪ್ರಮುಖ ಮುಖಂಡರು, ಸಂಸದರು, ಶಾಸಕರು, ದೆಹಲಿಯ ಬಿಜೆಪಿಯ ಪ್ರಧಾನ ಕಚೇರಿಗೆ ಹೋಗುತ್ತೇವೆ ; ತಾಕತ್ತಿದ್ದರೆ ಬಂಧಿಸಿ – ಕೇಜ್ರಿವಾಲ್ ಖಡಕ್ ಸವಾಲ್

ಹೊಸದಿಲ್ಲಿ : ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ, ದೊಡ್ಡ ನಿರ್ಧಾರಕ್ಕೆ ಬಂದಿರುವ ಆಮ್ ಆದ್ಮಿ ಪಕ್ಷ, ಬಿಜೆಪಿ ಕೇಂದ್ರ ಕಚೇರಿಗೆ ಹೋಗುವ ನಿರ್ಧಾರಕ್ಕೆ ಬಂದಿದೆ.

ಈ ಸಂಬಂಧ ಮಾಹಿತಿ ನೀಡಿರುವ ಕೇಜ್ರಿವಾಲ್, ” ನಮ್ಮ ಪಕ್ಷದ ಎಲ್ಲಾ ಪ್ರಮುಖ ಮುಖಂಡರು, ಸಂಸದರು, ಶಾಸಕರು, ದೆಹಲಿಯ ಬಿಜೆಪಿಯ ಪ್ರಧಾನ ಕಚೇರಿಗೆ ನಾಳೆ (ಮೇ 19) ಮಧ್ಯಾಹ್ನ ಹನ್ನೆರಡು ಗಂಟೆಗೆ ಹೋಗಲಿದ್ದೇವೆ. ಯಾರನ್ನೆಲ್ಲಾ ಬಂಧಿಸಬೇಕು ಎಂದು ಬಿಜೆಪಿ ಯೋಜನೆ ಹಾಕಿಕೊಂಡಿದಿಯೋ ಅವರನ್ನೆಲ್ಲಾ ನಿಮ್ಮ ಕಚೇರಿಯಲ್ಲಿಯೇ ಬಂಧಿಸಬಹುದು” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಬಿಜೆಪಿಯವರು ಆಮ್ ಆದ್ಮಿ ಪಕ್ಷದ ಮೇಲೆ ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ. ನನ್ನನ್ನು, ಸಿಸೋಡಿಯಾ, ಸಂಜಯ್ ಸಿಂಗ್, ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಕಳುಹಿಸಿದರು. ಇಂದು ನನ್ನ ಆಪ್ತನನ್ನೂ ಜೈಲಿಗೆ ಹಾಕಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರಾಘವ್ ಚಡ್ಡಾ, ಸೌರಭ್ ಭಾರದ್ವಾಜ್ ಅವರನ್ನೂ ಸ್ವಲ್ಪದಿನಗಳಲ್ಲಿ ಜೈಲಿಗೆ ಕಳುಹಿಸಲಿದ್ದಾರೆ. ನಮ್ಮನ್ನೆಲ್ಲಾ ಬಿಜೆಪಿಯವರು ಯಾಕೆ ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಯೋಚಿಸುತ್ತಿದ್ದೆ. ದೆಹಲಿಯ ಸರ್ಕಾರೀ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿದ್ದಕ್ಕಾಗಿಯೇ, ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಬಡವರಿಗೆ ಕೊಡುತ್ತಿರುವುದಕ್ಕಾಗಿ ನಮ್ಮನ್ನು ಜೈಲಿಗೆ ಕಳುಹಿಸುದ್ದೀರಾ ಎಂದು ಬಿಜೆಪಿಯವರನ್ನು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಜೈಲಿನ ಆಟವನ್ನು ಆಡುತ್ತಿದ್ದಾರೆ. ಹಾಗಾಗಿ, ನಾವು ನಮ್ಮ ಪಕ್ಷದ ಎಲ್ಲಾ ಪ್ರಮುಖರ ಜೊತೆಗೆ ಬಿಜೆಪಿಯ ಕೇಂದ್ರ ಕಚೇರಿಗೆ ಮಧ್ಯಾಹ್ನ ಆಗಮಿಸಲಿದ್ದೇವೆ. ಯಾರನ್ನೆಲ್ಲ ಬಂಧಿಸಬೇಕೋ, ಎಲ್ಲರನ್ನೂ ಒಂದೇ ಸರಿ ಜೈಲಿಗೆ ಹಾಕಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ನಮ್ಮನ್ನೆಲ್ಲಾ ಬಂಧಿಸಿದರೆ ಆಮ್ ಆದ್ಮಿ ಪಕ್ಷ ನಾಶವಾಗಲಿದೆ ಎನ್ನುವುದು ನಿಮ್ಮ ಅಭಿಪ್ರಾಯವಾದರೆ ಅದು ತಪ್ಪು. ನಾವು ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮಲಿದ್ದೇವೆ. ಆಮ್ ಆದ್ಮಿ ಪಕ್ಷವು ಬರೀ ಒಂದು ಪಾರ್ಟಿಯಲ್ಲ, ಇದೊಂದು ವಿಚಾರಧಾರೆ. ದೇಶದ ಎಲ್ಲರ ಹೃದಯದಲ್ಲೂ ನಾವು ಸ್ಥಾನ ಪಡೆದಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ನಮ್ಮ ಎಷ್ಟು ನಾಯಕರನ್ನು ನೀವು ಜೈಲಿಗೆ ಕಳುಹಿಸುತ್ತೀರೋ, ಅದಕ್ಕೆ ನೂರರಷ್ಟು ನಾಯಕರು ನಮ್ಮಲ್ಲಿ ಹುಟ್ಟಿಕೊಳ್ಳುತ್ತಾರೆ ಎಂದು ಕೇಜ್ರಿವಾಲ್, ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಸಂಬಂಧ ಆರೋಪಿ, ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್‌ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Latest Indian news

Popular Stories