ಎಎಪಿ ಶಾಸಕರ ಖರೀದಿ ಆರೋಪ: ದೆಹಲಿ ಪೊಲೀಸರಿಂದ ಸಚಿವೆ ಅತಿಶಿಗೆ ನೋಟಿಸ್ ಜಾರಿ

ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ತಂಡ ಭಾನುವಾರ ದೆಹಲಿ ಹಣಕಾಸು ಸಚಿವ ಅತಿಶಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ನೋಟಿಸ್ ನೀಡಿದೆ.

ಇಂದು ಮಧ್ಯಾಹ್ನ 12.55ಕ್ಕೆ ಎಎಪಿ ನಾಯಕಿಯ ನಿವಾಸಕ್ಕೆ ಎರಡನೇ ಬಾರಿ ಆಗಮಿಸಿದ ಕ್ರೈಂ ಬ್ರಾಂಚ್ ತಂಡಕ್ಕೆ ಸಚಿವೆ ಸಿಗದಿದ್ದ ಕಾರಣ ಅವರ ಸಿಬ್ಬಂದಿಗೆ ನೋಟಿಸ್ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನೋಟಿಸ್ ಪ್ರಕಾರ, ಅಪರಾಧ ವಿಭಾಗವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ಅವರು ಬಿಜೆಪಿ ವಿರುದ್ಧದ ಶಾಸಕರ ಖರೀದಿ ಆರೋಪದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಫೆಬ್ರುವರಿ 5ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ದೆಹಲಿ ಸಚಿವೆಗೆ ಸೂಚಿಸಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕ್ರೈಂ ಬ್ರಾಂಚ್ ಅಧಿಕಾರಿಗಳು ನೋಟಿಸ್ ನೀಡಿದ ಒಂದು ದಿನದ ನಂತರ ಅತಿಶಿ ಅವರಿಗೆ ನೋಟಿಸ್ ನೀಡಲಾಗಿದೆ. ಎಎಪಿಯ ಏಳು ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸಿದೆ ಎಂಬ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಮೂರು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ.

Latest Indian news

Popular Stories