ಅಸ್ಸಾಂನಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ: ರಾಷ್ಟ್ರೀಯ ಬಜರಂಗದಳದ ಇಬ್ಬರು ಸದಸ್ಯರ ಬಂಧನ

ಗುವಾಹಟಿ: ಅಸ್ಸಾಂನ ದರ್ರಾಂಗ್ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಬಜರಂಗದಳದ ಇಬ್ಬರು ಸದಸ್ಯರನ್ನು ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಲ್ಡೊಯಿಯಲ್ಲಿರುವ ಮಹರ್ಷಿ ವಿದ್ಯಾ ಮಂದಿರ ಶಾಲೆಯ ಆವರಣದಲ್ಲಿ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ಬಜರಂಗದಳದ ಇಬ್ಬರು ಸದಸ್ಯರಾದ ಬಿಜೋಯ್ ಘೋಷ್ ಮತ್ತು ಗೋಪಾಲ್ ಬೋರೊ ಅವರನ್ನು ಬಂಧಿಸಲಾಗಿದೆ ಎಂದು ದರ್ರಾಂಗ್ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಸೋನೊವಾಲ್ ಪಿಟಿಐಗೆ ತಿಳಿಸಿದ್ದಾರೆ.

ಕೋರ್ಟ್ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಶಾಲೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರದಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.

ಶಸ್ತ್ರಾಸ್ತ್ರ ತರಬೇತಿ ಶಿಬಿರಕ್ಕೆ ಅನುಮತಿ ನೀಡಿದ ಆರೋಪದ ಮೇಲೆ ಕಳೆದ ಮಂಗಳವಾರ ಶಾಲೆಯ ಪ್ರಾಂಶುಪಾಲರಾದ ಹೇಮಂತ ಪಯೆಂಗ್ ಮತ್ತು ಶಾಲೆಯ ಆಡಳಿತಾಧಿಕಾರಿ ರತನ್ ದಾಸ್ ಅವರನ್ನು ಬಂಧಿಸಲಾಗಿದೆ ಎಂದು ಸೋನೊವಾಲ್ ಅವರು ತಿಳಿಸಿದ್ದಾರೆ.

“ಪಯೆಂಗ್ ಮತ್ತು ದಾಸ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ನಾವು ಪ್ರಸ್ತುತ ಸಂಘಟನೆಯ ಇತರ ಸದಸ್ಯರನ್ನು ಹುಡುಕುತ್ತಿದ್ದೇವೆ” ಎಂದು ಎಸ್ಪಿ ಹೇಳಿದ್ದಾರೆ.

Latest Indian news

Popular Stories