ಮುಂಗಾರು ಹಂಗಾಮಿನ ಸಿದ್ಧತೆ ಮಾಡಿಕೊಳ್ಳಲು ಸಹಾಯಕ ಆಯುಕ್ತ ಸಂಗಪಾವಿ ಸಲಹೆ

ರಾಯಚೂರು: ಮುಂಗಾರು ಆರಂಭವಾಗುವ ಹಿನ್ನಲೆಯಲ್ಲಿ ರೈತರಿಗೆ ಸಮರ್ಪಕ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಒದಗಿಸಲು ಸರಬರಾಜು ಕಂಪನಿಗಳು ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ ಸೂಚನೆ ನೀಡಿದರು.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮಂಗಳವಾರ 2024-25ನೇ ಸಾಲಿನ ಮುಂಗಾರು ಸಿದ್ದತೆ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಳಪೆ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಕಳಪೆ ಬಿತ್ತನೆ ಬೀಜಗಳನ್ನು ಪ್ರಯೋಗಾಲಯ ಪರೀಕ್ಷಗೆ ಒಳಪಡಿಸಿ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಬೇಕು. ಪರವಾನಿಗೆ ಪಡೆಯದೇ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ಬಗ್ಗೆ ಪರಿಶೀಲಿಸಿ ಕಂಪನಿ, ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮತ್ತು ರೈತರಿಗೆ ಮುಂಗಾರುವಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್.ದೇವಿಕಾ ಮಾತನಾಡಿ, ಜಿಲ್ಲೆಯಲ್ಲಿ 2024-25ನೇ ಸಾಲಿಗೆ ಒಟ್ಟು 5,56,276 ಹೆಕ್ಟರ್ ಪ್ರದೇಶವನ್ನು ಮುಂಗಾರು ಹಂಗಾಮಿನ ಕ್ಷೇತ್ರದ ಗುರಿಯನ್ನು ಹೊಂದಿದ್ದು, ಅದರಲ್ಲಿ 2,91,467 ಹೆಕ್ಟರ್ ಖುಷ್ಕಿ ಹಾಗೂ 2,64,809 ನೀರಾವರಿ ಪ್ರದೇಶದ ಗುರಿಯನ್ನು ಹೊಂದಲಾಗಿದೆ ಎಂದರು.
2024-25ನೇ ಸಾಲಿನಲ್ಲಿ ಜಿಲ್ಲೆಯ ರಾಯಚೂರು, ಮಾನವಿ, ದೇವದುರ್ಗ, ಲಿಂಗಸುಗೂರು ಹಾಗೂ ಸಿಂಧನೂರಿನಿಂದ ಭತ್ತ, ತೊಗರಿ, ಹೆಸರು, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಒಟ್ಟು 5228.8 ಕ್ವಿಂಟಾಲ್‍ನಷ್ಟು ಬಿತ್ತನೆ ಬೀಜಗಳ ಅವಶ್ಯಕತೆ ಇದ್ದು, 5437.8 ಕ್ವಿಂಟಾಲ್‍ನಷ್ಟು ಯೋಜನೆಯನ್ನು ರೂಪಿಸಲಾಗಿದೆ.

ಈ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕ ಜಯಪ್ರಕಾಶ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀಜ ಘಟಕದ ವಿಜ್ಞಾನಿ ನಿಡಗುಂದಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹ್ಮದ್ ಅಲಿ ಸೇರಿದಂತೆ ವಿವಿಧ ರಸಗೊಬ್ಬರ, ಬಿತ್ತನೆ ಬೀಜಗಳ ಕಂಪನಿಗಳ ಮುಖ್ಯಸ್ಥರು, ರೈತರು, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು

Latest Indian news

Popular Stories