ರೇವಣ್ಣಗೆ ಜಾಮೀನು: ಸಂಭ್ರಮ ಬೇಡ, ಪ್ರಕರಣದಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ; ಕುಮಾರ ಸ್ವಾಮಿ ಕಿಡಿ

ಬೆಂಗಳೂರು: ರೇವಣ್ಣ ಅವರಿಗೆ ಜಾಮೀನು ದೊರೆತಿರುವುದರಿಂದ ನನಗೆ ಸಂತಸವಾಗಿಲ್ಲ. ರಾಜ್ಯವೇ ತಲೆ ತಗ್ಗಿಸುವ ಘಟನೆ ಇದಾಗಿದ್ದು, ಸಂತಸಪಡುವ ಸಮಯವೂ ಇದಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮ ಪಡುವುದು ಬಂಡ. ನಾನು ಸಂತೋಷ ಪಡುತ್ತೇನೆ ಎಂದು ಭಾವಿಸಬೇಡಿ. ಕಾರ್ಯಕರ್ತರು ಸಂಭ್ರಮಿಸುವ ಸಮಯ ಇದಲ್ಲ. ಇದು ರಾಜ್ಯವೇ ತಲೆ ತಗ್ಗಿಸುವ ಘಟನೆ ಎಂದು ಹೇಳಿದರು.

ನಿಮಗೆ ಜನ್ಮಕೊಟ್ಟ ತಂದೆ-ತಾಯಿ ಇದ್ದಾರೆ, ಒಡಹುಟ್ಟಿದವರಿದ್ದಾರೆ. ಪೆನ್​​ಡ್ರೈವ್​ ಹಂಚಿದವರ ವಿರುದ್ಧ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಎಸ್​ಐಟಿ ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ. ಎಸ್​ಐಟಿ ತನಿಖೆ ವರದಿ ಶಾಸಕರಿಗೆ ಸರಬರಾಜಾಗುತ್ತಿದೆಯಾ? ನಮ್ಮ ರಾಜ್ಯದಲ್ಲಿ ದೊಡ್ಡ ತಿಮಿಂಗಿಲ ಇದೆ. ಆ ತಿಮಿಂಗಲ ಯಾರೆಂದು ರಾಜ್ಯದ ಜನರಿಗೂ ಗೊತ್ತಿದೆ. ಏಪ್ರಿಲ್ 22ರಂದು ದಾಖಲಾದ ಎಫ್​ಐಆರ್​ಗೆ ಸಂಬಂಧಿಸಿ ಒಬ್ಬರನ್ನೂ ಬಂಧಿಸಿಲ್ಲ. ನವೀನ್​ ಗೌಡ ನಮ್ಮ ಪಕ್ಷದವರಿಗೆ ಕೊಟ್ಟೆ ಅಂದಿದ್ದಾನೆ. ನಮ್ಮ ಪಕ್ಷದವರಿಗೆ ಪೆನ್​ಡ್ರೈವ್​ ಕೊಟ್ಟಿದ್ದೆ ಎಂದು ಹೇಳಿದ್ದಾನೆ. ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಈಗಲೇ ಈ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ. ನನ್ನ ಬಳಿ ಎಲ್ಲ ದಾಖಲೆಗಳಿವೆ. ಈಗಲೇ ನಾನು ಏನೂ ಹೇಳಲ್ಲ ಎಂದು ತಿಳಿಸಿದರು.

ರೇವಣ್ಣ ಕುಟುಂಬ ಮುಗಿಸಲು ಪ್ಲ್ಯಾನ್​ ಮಾಡ್ತಿದ್ದೇನೆಂದು ಹಲವರು ಈ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ನ್ಯಾಯದ ಪರವಾಗಿ ಇದ್ದೇನೆ. ಇಂತಹ ಘಟನೆ ಮತ್ತೆ ಪುನರಾವರ್ತನೆಯಾಗಬಾರದು. ಯಾವುದೇ ಮುಲಾಜಿಗೆ ಒಳಗಾಗದೇ ತನಿಖೆ ಆಗಬೇಕು. ಮಹಿಳಾ ಸಂತ್ರಸ್ತೆಯರ ಪರ ಹೋರಾಟ ಮಾಡುತ್ತೇನೆ. ಪೆನ್​​ಡ್ರೈವ್ ಪ್ರಕರಣ ದೊಡ್ಡಮಟ್ಟದಲ್ಲಿ ನಡೆದಿದೆ. ಇನ್ನೂ ಸಮಯ ಇದೆ, ನಾನು ದುಡುಕಲ್ಲ ಎಂದರು.

Latest Indian news

Popular Stories