ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( ಪಿಎಫ್‌ಐ ) ಮುಖ್ಯಸ್ಥ ಇ ಅಬೂಬಕ್ಕರ್ ಅವರಿಗೆ ಜಾಮೀನು ನಿರಾಕರಣೆ

ದೇಶದಲ್ಲಿ ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( ಪಿಎಫ್‌ಐ ) ಮುಖ್ಯಸ್ಥ ಇ ಅಬೂಬಕ್ಕರ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಲು ನಿರಾಕರಿಸಿದೆ ಎಂದು ‘ಬಾರ್ & ಬೆಂಚ್’ ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಜಾಮೀನು ನಿರಾಕರಣೆಯ ವೇಳೆ ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠವು, “ಹಿಂದೂ ನಾಯಕರನ್ನು ಕೊಲ್ಲುವ ಯೋಜನೆ, ಭದ್ರತಾ ಪಡೆಗಳ ಮೇಲೆ ದಾಳಿ ಮತ್ತು 2047ರ ವೇಳೆಗೆ ಖಲೀಫತ್ ಸ್ಥಾಪಿಸುವ ಗುರಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಗುರಿ ಭಾರತದ ಏಕತೆ ಮತ್ತು ಸಾರ್ವಭೌಮತ್ವವನ್ನು ಪ್ರಶ್ನಿಸುವುದಾಗಿತ್ತು” ಎಂದು ಹೇಳಿದೆ.

ಕೇಂದ್ರ ಸರ್ಕಾರವು ಪಿಎಫ್‌ಐ ಮೇಲೆ ಸೆಪ್ಟೆಂಬರ್ 28, 2022ರಂದು ನಿಷೇಧ ಹೇರಿತ್ತು. ಐಸಿಸ್‌ ಸೇರಿದಂತೆ ಜಾಗತಿಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆಪಾದನೆಯನ್ನು ಹೊರಿಸಿ, ಪಿಎಫ್‌ಐ ಅನ್ನು ಕೇಂದ್ರ ಸರ್ಕಾರವು ನಿಷೇಧ ಮಾಡಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪಿಎಫ್‌ಐ ಸಂಘಟನೆಯ ಕಚೇರಿಗಳು, ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ವಿವಿಧ ಕೇಂದ್ರ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು. ಇದೇ ವೇಳೆ ಪಿಎಫ್‌ಐ ಮುಖ್ಯಸ್ಥ ಅಬೂಬಕರ್ ಅವರನ್ನು ಕೂಡ ಬಂಧಿಸಲಾಗಿತ್ತು.

ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಪುದುಚೆರಿ, ದೆಹಲಿ, ರಾಜಸ್ಥಾನಗಳಲ್ಲಿ ಪಿಎಫ್‌ಐ ವಿರುದ್ಧ ತನಿಖಾ ಸಂಸ್ಥೆಗಳು ದಾಳಿ ನಡೆಸಿದ್ದವು.

ಪಿಎಫ್‌ಐ ಹಾಗೂ ಅದರ ಸದಸ್ಯರು ಮತ್ತು ಪದಾಧಿಕಾರಿಗಳು ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಹಣ ಸಂಗ್ರಹಿಸುವ ಕ್ರಿಮಿನಲ್‌ ಸಂಚು ರೂಪಿಸಿದ್ದಾರೆ. ಈ ಉದ್ದೇಶಕ್ಕಾಗಿ ಕಾರ್ಯಕರ್ತರಿಗೆ ತರಬೇತಿ ನೀಡಲು ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದು ಎನ್‌ಐಎ ಆರೋಪಿಸಿತ್ತು. ಆದರೆ ಯುಎಪಿಎ ಅಡಿಯಲ್ಲಿ ತನ್ನ ವಿರುದ್ಧ ಎನ್‌ಐಎ ಪ್ರಕರಣ ಹೂಡಲು ಯಾವುದೇ ಆಧಾರವಿಲ್ಲ ಎಂದು ಅಬೂಬಕರ್‌ ಪರ ವಕೀಲರು ಪ್ರತಿಪಾದಿಸಿದ್ದರು.

ಅಬೂಬಕರ್ ಪರ ಹಿರಿಯ ವಕೀಲ ನಿತ್ಯಾ ರಾಮಕೃಷ್ಣನ್ ಮತ್ತು ವಕೀಲರಾದ ಆದಿತ್ ಪೂಜಾರಿ, ಎ ನೌಫಲ್, ಶೇಖ್ ಸೈಪನ್, ಅಪ್ರಜಿತಾ ಸಿನ್ಹಾ, ಶೌರ್ಯ ಮಿತ್ತಲ್, ಮಾಂತಿಕಾ ವೋಹ್ರಾ, ಶೆರೀಫ್ ಕೆಎ ಮತ್ತು ಆರಿಫ್ ಹುಸೇನ್ ವಾದ ಮಂಡಿಸಿದರು.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಾಹುಲ್ ತ್ಯಾಗ ಮತ್ತು ವಕೀಲರಾದ ವಿಕಾಸ್ ವಾಲಿಯಾ, ಸಂಗೀತ್ ಸಿಬೌ, ಪ್ರಿಯಾ ರೈ, ಜತಿನ್, ಮ್ಯಾಥ್ಯೂ ಎಂ ಫಿಲಿಪ್, ದುರ್ಗಾ ದಾಸ್ ಮತ್ತು ಹರ್ಷ್ ಸೆಹ್ರಾವತ್ ಎನ್‌ಐಎ ಪರವಾಗಿ ವಾದ ಮಂಡಿಸಿದರು.

Latest Indian news

Popular Stories