ಮಂಗಳೂರು: ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಬ್ಯಾಗ್‌ನಲ್ಲಿಟ್ಟದ್ದ ಹಣವನ್ನು ಬ್ಯಾಂಕ್ ನ ಕಚೇರಿಯಲ್ಲೇ ಖದೀಮರು ಎಗರಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ನಿವೃತ್ತ ಸೈನಿಕ ಅಂಬ್ರೋಸ್ ಡಿಸೋಜ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂಬ್ರೋಸ್ 50 ಸಾವಿರ ಹಣವನ್ನು ಬ್ಯಾಗ್ ನಲ್ಲಿ ಇರಿಸಿಕೊಂಡು ಬಿ.ಸಿ.ರೋಡಿನ ಎಸ್.ಬಿ.ಐ ಬ್ಯಾಂಕ್ ಗೆ ಬಂದಿದ್ದರು. ಇಲ್ಲಿನ ಇವರ ಖಾತೆಯಿಂದ 80 ಸಾವಿರ ಹಣವನ್ನು ಡ್ರಾ ಮಾಡಿ, ಒಟ್ಟು 1,30,000 ಹಣವನ್ನು ಒಂದೇ ಬ್ಯಾಗ್ ನಲ್ಲಿ ಹಾಕಿ ಬ್ಯಾಂಕ್ ನ ಟೇಬಲ್ ಮೇಲೆ ಇಟ್ಟು, ಪಾಸ್ ಬುಕ್ ಎಂಟ್ರಿ ಮಾಡಲು ಕೌಂಟರ್ ಬಳಿ ಹೋಗಿದ್ದರು. ಎಂಟ್ರಿ ಮಾಡಿಸಿ ವಾಪಸು ಟೇಬಲ್ ಕಡೆ ಬಂದಾಗ ಬ್ಯಾಗ್ ಕಾಣೆಯಾಗಿತ್ತು.
ಬ್ಯಾಗ್ ನ್ನು ಯಾರಾದರೂ ಕೈ ತಪ್ಪಿನಿಂದ ಹಿಡಿದುಕೊಂಡು ಹೋಗಿರಬಹುದು, ಅದನ್ನು ಮರಳಿ ಕೊಡಬಹುದೆಂದು ಭಾವಿಸಿದ ಅಂಬ್ರೋಸ್ ಮನೆಗೆ ಹಿಂತಿರುಗಿದ್ದರು. ಆದರೆ ದಾರಿ ಮಧ್ಯೆ ಹಣ, ಪಾಸ್ ಬುಕ್ ಹಾಗೂ ಇತರೆ ದಾಖಲೆಗಳಿದ್ದ ಹ್ಯಾಂಡ್ ಬ್ಯಾಗ್ ಬಿ.ಸಿ ರೋಡು ಕೈಕುಂಜೆಗೆ ಹೋಗುವ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು, ಆದರೆ ಅದರಲ್ಲಿದ್ದ ನಗದು ಹಣ ಸಿಕ್ಕಿರಲಿಲ್ಲ. ಕೂಡಲೇ ಅಂಬ್ರೋಸ್ ನಗರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.