ಬೆಂಗಳೂರು: ಮುಂದೆ ಹೋಗು ಎಂದಿದ್ದಕ್ಕೆ BMTC ಕಂಡಕ್ಟರ್ ಗೆ ಇರಿದ ಪ್ರಯಾಣಿಕ!

ಬೆಂಗಳೂರು: ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಬಿಎಂಟಿಸಿ ಬಸ್ ಕಂಡಕ್ಟರ್‌ಗೆ 25 ವರ್ಷದ ಪ್ರಯಾಣಿಕ ಚಾಕುವಿನಿಂದ ಇರಿದಿರುವ ಘಟನೆ ಮಂಗಳವಾರ ಸಂಜೆ ಪೂರ್ವ ಬೆಂಗಳೂರಿನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಖಂಡ್ ಮೂಲದ ಹರ್ಷ್ ಸಿನ್ಹಾ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿನ್ಹಾ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ (ಕೆಎ 57 ಎಫ್ 0015) ಪ್ರಯಾಣಿಸುತ್ತಿದ್ದಾಗ ಕಂಡಕ್ಟರ್, 45 ವರ್ಷದ ಯೋಗೇಶ್ ಅವರು ಬಾಗಿಲಿನ ಬಳಿ ನಿಲ್ಲದಂತೆ ಒಳಗೆ ಹೋಗುವಂತೆ ಹರ್ಷ್ ಸಿನ್ಹಾಗೆ ಸೂಚಿಸಿದರು.

ಸಿಟ್ಟಿನ ಭರದಲ್ಲಿ ಚಾಕು ಹೊರತೆಗೆದು ಸಿನ್ಹಾ ಕಂಡಕ್ಟರ್ ಹೊಟ್ಟೆಗೆ ಇರಿದಿದ್ದಾನೆ. ಕಂಡಕ್ಟರ್‌ಗೆ ರಕ್ತಸ್ರಾವವಾಗುತ್ತಿದ್ದಂತೆಯೇ ಸಿನ್ಹಾ ಇತರ ಪ್ರಯಾಣಿಕರಿಗೂ ಚಾಕುವಿನಿಂದ ಇರಿಯುವುದಾಗಿ ಬೆದರಿಸಿ ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದ, ಆದರೆ ಡ್ರೈವರ್ ಬಾಗಿಲನ್ನು ಲಾಕ್ ಮಾಡಿ ಸಿನ್ಹಾನನ್ನು ಒಳಗೆ ಇರುವಂತೆ ಮಾಡಿದ್ದಾರೆ. ಆದರೆ ಸಿನ್ಹಾ ಸುತ್ತಿಗೆ ತೆಗೆದುಕೊಂಡು ಬಸ್ ಧ್ವಂಸ ಮಾಡಲು ಪ್ರಾರಂಭಿಸಿದರು.

ವೈಟ್‌ಫೀಲ್ಡ್‌ನ ವೈದೇಹಿ ಸರ್ಕಲ್ ಬಳಿ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಬಸ್ ಕಂಡಕ್ಟರ್‌ನನ್ನು ಚಿಕಿತ್ಸೆಗಾಗಿ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ಸಿನ್ಹಾ ನನ್ನು ಬಂಧಿಸಿದ್ದಾರೆ. ಸಿನ್ಹಾ ಬಿಪಿಒ ಕಂಪನಿ ಟೆಲಿಪರ್ಫಾರ್ಮೆನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ, ಸೆಪ್ಟೆಂಬರ್ 20 ರಂದು ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

Latest Indian news

Popular Stories