ಬಿಹಾರ: ಇಂದು ನಿತೀಶ್ ವಿಶ್ವಾಸ ಮತಯಾಚನೆ, ಸಂಪರ್ಕಕ್ಕೆ ಸಿಗದ ಬಿಜೆಪಿ, ಜೆಡಿಯುನ ಮೂವರು ಶಾಸಕರು!

ಪಾಟ್ನಾ: ಮತ್ತೆ ಎನ್‌ಡಿಎಗೆ ಮರಳಿದ ಎರಡು ವಾರಗಳ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ, ಫೆಬ್ರವರಿ 12 ರಂದು ರಾಜ್ಯ ಅಸೆಂಬ್ಲಿಯಲ್ಲಿ ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಮಹಾಘಟಬಂಧನ್ ಮತ್ತು ಎನ್‌ಡಿಎ ಹಿಂದಿಂದಲೇ ಸಭೆ ಆಯೋಜಿಸಿದ್ದು, ಇವೆರಡರ ನಡುವಿನ ರಾಜಕೀಯ ಟೆನ್ಷನ್ ಸಾರ್ವಕಾಲಿಕ ಉತ್ತುಂಗಕ್ಕೇರಿದೆ.

ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ಎಲ್ಲಾ ಬಿಜೆಪಿ ಶಾಸಕರನ್ನು ಪಾಟ್ನಾದ ಹೋಟೆಲ್ ಪಟ್ಲಿಪುತ್ರ ಎಕ್ಸೋಟಿಕಾಗೆ ಸ್ಥಳಾಂತರಿಸಲಾಗಿದೆ. ಜೆಡಿಯು ರಾಜ್ಯಾಧ್ಯಕ್ಷ ಉಮೇಶ್ ಕುಶ್ವಾಹಾ ಅವರು ಪಾಟ್ನಾದ ಹೋಟೆಲ್ ಚಾಣಕ್ಯದಲ್ಲಿದ್ದಾರೆ. ಬಿಜೆಪಿ ಹಾಗೂ ಜೆಡಿಯುನ ತಲಾ ಮೂವರು ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಆರ್‌ಜೆಡಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಲಿಬರೇಶನ್‌ನ ಶಾಸಕರು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮನೆಯಲ್ಲಿ ಜಮಾಯಿಸಿದ್ದಾರೆ. ಇವರ ಮನೆಯಲ್ಲಿದ್ದ ಕಾಂಗ್ರೆಸ್ ಶಾಸಕರು ತಮ್ಮ ನಿವಾಸಗಳಿಗೆ ತೆರಳಿದ್ದಾರೆ. ಎಸ್‌ಎಸ್‌ಪಿ ಮತ್ತು ಇತರ ಹಿರಿಯ ಅಧಿಕಾರಿಗಳು ತೇಜಸ್ವಿ ಯಾದವ್ ಅವರ ಮನೆಗೆ ಆಗಮಿಸಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿದ್ದಾರೆ.

ಸೋಮವಾರ ವಿಧಾನಸಭೆಯೊಳಗೆ ಪಕ್ಷದ ಎಲ್ಲಾ ಶಾಸಕರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಜೆಡಿಯು ವಿಪ್ ಜಾರಿ ಮಾಡಿದೆ. ವಿಪ್ ಧಿಕ್ಕರಿಸುವವರು ಸದಸ್ಯತ್ವ ಕಳೆದುಕೊಳ್ಳುತ್ತಾರೆ ಎಂದು ಪಕ್ಷದ ಮುಖ್ಯ ಸಚೇತಕ ಶ್ರವಣ್ ಕುಮಾರ್ ಹೇಳಿದ್ದಾರೆ. 243 ಸದಸ್ಯ ಬಲದ ವಿಧಾನಸಭೆಯಲ್ಲಿ 128 ಶಾಸಕರನ್ನು ಹೊಂದಿರುವ ಎನ್‌ಡಿಎ ಪರದಾಟ ನಡೆಸುವ ಸಾಧ್ಯತೆ ಇದೆ.

ಮಹಾಘಟಬಂಧನ್‌ನ ಭಾಗವಾಗಿರುವ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು 114 ಶಾಸಕರನ್ನು ಹೊಂದಿವೆ. ಈ ಮಧ್ಯೆ ಒಂಬತ್ತು ಜೆಡಿಯು ಶಾಸಕರು ಮತ್ತು ನಾಲ್ವರು ಬಿಜೆಪಿ ಶಾಸಕರು ಪಾಟ್ನಾಗೆ ಇನ್ನೂ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕ ಸಂತೋಷ್ ಮಿಶ್ರಾ ಹೇಳಿದ್ದಾರೆ. ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆಯಾಗಲಿದ್ದು, ನಾಳೆ ವಿಧಾನಸಭೆಯಲ್ಲಿ ಎಲ್ಲವೂ ಬಹಿರಂಗವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Latest Indian news

Popular Stories