ನವದೆಹಲಿ: ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿ ಹೊರಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಆಮ್ ಆದ್ಮಿ ಪಕ್ಷದ ಶಾಸಕರು ಹಾಗೂ ಕೌನ್ಸಿಲರ್ ಗಳನ್ನು ಶುಕ್ರವಾರ (ಫೆ.02) ವಶಕ್ಕೆ ಪಡೆದು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಚಂಢೀಗಢದ ಮೇಯರ್ ಚುನಾವಣೆಯಲ್ಲಿ ಮೋಸ ಮಾಡಲಾಗಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ 25ಕ್ಕೂ ಅಧಿಕ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.
ನವದೆಹಲಿಯ ಬಿಜೆಪಿಯ ಕೇಂದ್ರ ಕಚೇರಿ ಹೊರಭಾಗದಲ್ಲಿ ಉದ್ದೇಶಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹರ್ಯಾಣ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಸುಶೀಲ್ ಗುಪ್ತಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಎಎನ್ ಐ ವರದಿ ಮಾಡಿದೆ.
ದೆಹಲಿಯ ಪಂಡಿತ್ ದೀನ್ ದಯಾಳ್ ಮಾರ್ಗ್ ಸೇರಿದಂತೆ ಹಲವಾರು ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಿರುವುದಾಗಿ ವರದಿ ವಿವರಿಸಿದೆ. ಮತ್ತೊಂದೆಡೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಭ್ರಷ್ಟ ಸರ್ಕಾರ, ಕೂಡಲೇ ಕೇಜ್ರಿವಾಲ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ಕೂಡಾ ಆಮ್ ಆದ್ಮಿ ಪಕ್ಷದ ಕಚೇರಿ ಸಮೀಪ ಧರಣಿ ನಡೆಸಿದೆ.