ಕಾರವಾರ: ಸಂಸದ ಅನಂತಕುಮಾರ್ ಹೆಗಡೆ ಮೇಲೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 153 ಎ ಅಡಿ ಕೇಸ್ ದಾಖಲಿಸಲಾಗಿದೆ.
ಕೋಮುಪ್ರಚೋದನೆ ಭಾಷಣ , ಅನುಮತಿ ಇಲ್ಲದೆ ಹೆಬಳೆ ಪಂಚಾಯತ ತೆಂಗಿನ ಗುಂಡಿ ಬೀಚ್ ರಸ್ತೆಯ ಸರ್ಕಲ್ ನಲ್ಲಿ ಸಾವರಕರ್ ನಾಮಫಲಕ ಹಾಗೂ ಭಾಗಧ್ವಜ ಹಾರಿಸಿದ ಕಾನೂನು ಬಾಹಿರ ಕೃತ್ಯದ ಅಡಿ ಸಂಸದ ಅನಂತ ಕುಮಾರ್ ಹೆಗಡೆ ಸೇರಿ 21 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೆಬಳೆ ಗ್ರಾಮ ಪಂಚಾಯತಿ ಪಿಡಿಒ ಮೇಲಾಧಿಕಾರಿಗಳಿಗೆ ಕಾನೂನು ಬಾಹಿರ ಕೃತ್ಯದ ವಿರುದ್ಧ ದೂರು ನೀಡಿದ್ದರು. ಮಾ.4 ರಂದು ಸಂಸದ ಹೆಗಡೆ ಹಾಗೂ ಅವರ ಬೆಂಬಲಿಗರು ಅನುಮತಿ ಇಲ್ಲದರಲೆ ಭಾಗಧ್ವಜ ಹಾರಿಸಿ, ಸರ್ಕಾರಕ್ಕೆ ಸವಾಲು ಹಾಕಿದ್ದರು.
ಎರಡು ಕೋಮುಗಳ ನಡುವೆ ಕೋಮು ಪ್ರಚೋದಕ ವಾತಾವರಣ ಸೃಷ್ಟಿಸಿದ್ದರು. ಇದನ್ನು ಅರಿತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಸ್ಪಿ ಈ ಪ್ರಕರಣದಲ್ಲಿ ಭಟ್ಕಳ ಗ್ರಾಮೀಣ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದರು. ಜ.27 ರಂದು ಅನಧಿಕೃತವಾಗಿ ಕಟ್ಟಿದ ಧ್ವಜಕಟ್ಟೆ, ಸಾವರಕರ್ ನಾಮಫಲಕ ಹಾಕಿದ್ದನ್ನು ಹಾಗೂ ಭಾಗ್ವಧ್ವಜ ಹಾರಿಸಿದ್ದನ್ನು ಅಧಿಕಾರಿಗಳು, ಪೊಲೀಸರು ತೆರವುಗೊಳಿಸಿದ್ದರು.
ನಂತರ ಮಾ.4 ರಂದು ಸಂಸದ ಅನಂತ ಕುಮಾರ್ ಹೆಗಡೆ ತನ್ನ ಬೆಂಬಲಿಗರೊಂದಿಗೆ ತೆಂಗಿನ ಗುಂಡಿ ಬೀಚ್ ರಸ್ತೆ ಸರ್ಕಲ್ ನಲ್ಲಿ ಸರ್ಕಾರದ ಅಥವಾ ಪಂಚಾಯತಿ ಅನುಮತಿ ಪಡೆಯದೇ ಧ್ವಜಹಾರಿಸಿದ್ದರು. ಮುಖ್ಯಮಂತ್ರಿ ಬನವಾಸಿಗೆ ಬರುವ ಒಂದು ದಿನ ಮೊದಲು ಕಾನೂನು ಬಾಹಿರ ಕೃತ್ಯವನ್ನು ಎಸಗಿದ್ದರು. ಈ ಕಾರಣ ಭಟ್ಕಳ ಗ್ರಾಮೀಣ ಪೊಲೀಸರು ಸಂಸದ ಹೆಗಡೆ ಸೇರಿದಂತೆ ಅವರ ಜೊತೆಗೆ ಈ ಕೃತ್ಯದಲ್ಲಿ ಭಾಗಿಯಾದ 21 ಜನರ ವಿರುದ್ಧ ಸೆಕ್ಷನ್ 143, 147, 149 ಹಾಗೂ 153 ಎ ಅಡಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಒಂದುವೊರೆ ತಿಂಗಳಲ್ಲಿ ಸಂಸದ ಅನಂತ ಕುಮಾರ್ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ಪ್ರಕರಣ ದಾಖಲಾದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗೆ ಏಕ ವಚನ ಪ್ರಯೋಗ ಹಾಗೂ ಕೋಮು ಭಾವನೆಯ ಭಾಷಣ ಕಾರಣ ಕುಮಟಾ ಪೊಲೀಸ್ ಠಾಣೆ, ಮುಂಡಗೋಡ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ನಿನ್ನೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಏಕವಚನ ಬಳಸದಂತೆ ಜನಪ್ರತಿನಿಧಿಗಳ ವಿಚಾರಣೆಯ ಕೋರ್ಟ ನ್ಯಾಯಾಧೀಶರು ಅನಂತ ಕುಮಾರ್ ಹೆಗಡೆಗೆ ಅವರ ವಕೀಲರ ಮೂಲಕ ಎಚ್ಚರಿಕೆ ಸಹ ನೀಡಿದ್ದು ಇಲ್ಲಿ ಸ್ಮರಣೀಯ.
……