Featured StoryDakshina Kannada

ಮಂಗಳೂರು: ಪತಿಯ ಹತ್ಯೆ ಪ್ರಕರಣ; ಮಹಿಳೆ ಸಹಿತ ಐವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ತನ್ನ ಪತಿಯನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.


ಘಟನೆ 2016ರಲ್ಲಿ ನಡೆದಿತ್ತು. ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪಾವೂರು ನಿವಾಸಿ ಇಸ್ಮಾಯಿಲ್‌ (59) ಕೊಲೆಯಾದವರು. ಅವರ ಪತ್ನಿ ನೆಬಿಸಾ(40), ಆಕೆಯ ಪ್ರಿಯಕರ ಕುತ್ತಾರುಪದವಿನ ಜಮಾಲ್‌ ಅಹಮ್ಮದ್‌ (38), ಉಳ್ಳಾಲದ ಅಬ್ದುಲ್‌ ಮುನಾಫ್ ಆಲಿಯಾಸ್‌ ಮುನ್ನ (41), ಉಳ್ಳಾಲದ ಅಬ್ದುಲ್‌ ರೆಹಮಾನ್‌ (36) ಮತ್ತು ಬೋಳಿಯಾರ್‌ನ ಶಬೀರ್‌ (31) ಶಿಕ್ಷೆಗೊಳಗಾದವರು.


ಅನೈತಿಕ ಸಂಬಂಧ ಕಾರಣ
ಇಸ್ಮಾಯಿಲ್‌ ಅವರು ನೆಬಿಸಾಳನ್ನು ಎರಡನೇ ವಿವಾಹವಾಗಿದ್ದು ಅವರು ನಾಲ್ವರು ಮಕ್ಕಳನ್ನು ಹೊಂದಿದ್ದರು. ನೆಬಿಸಾ ಮತ್ತು ಜಮಾಲ್‌ನಿಗೆ ಅನೈತಿಕ ಸಂಬಂಧವಿತ್ತು. ಇದು ಇಸ್ಮಾಯಿಲ್‌ಗೆ ಗೊತ್ತಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕೆ ಆಗಾಗ್ಗೆ ಪತಿ -ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ಹಿನ್ನೆಲೆಯಲ್ಲಿ ನೆಬಿಸಾ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ್ದಳು.


ಬಾಡಿಗೆ ನೆಪದಲ್ಲಿ ಕರೆದೊಯ್ದಿದ್ದರು
ಜಮೀಲ್‌ನ ಜತೆ ಸೇರಿ ಪತಿ ಇಸ್ಮಾಯಿಲ್‌ನನ್ನು ಕೊಲೆ ಮಾಡಲು ನೆಬಿಸಾ ಸಂಚು ರೂಪಿಸಿದ್ದಳು. ಜಮಾಲ್‌ ತನ್ನ ಸ್ನೇಹಿತ ಆಟೋರಿಕ್ಷಾ ಚಾಲಕ ಅಬ್ದುಲ್‌ ರೆಹಮಾನ್‌ ಜತೆ ಅಬ್ದುಲ್‌ ಮುನಾಫ್ ಬಳಿ ತೆರಳಿ 2.50 ಲ.ರೂ.ಗಳಿಗೆ ಕೊಲೆ ಸುಪಾರಿ ನೀಡಿದ್ದರು. ಇಸ್ಮಾಯಿಲ್‌ ಫ‌ರಂಗಿಪೇಟೆಯಲ್ಲಿ ಮೂರು ವಾಹನಗಳನ್ನು ಹೊಂದಿ ಬಾಡಿಗೆ ನಡೆಸುತ್ತಿದ್ದರು. ಆರೋಪಿಗಳು 2016ರ ಫೆ. 16ರಂದು ಸಂಜೆ ಇಸ್ಮಾಯಿಲ್‌ ಬಳಿ ಹೋಗಿ ಬೆಂಗಳೂರಿಗೆ ಬಾಡಿಗೆ ಇದೆ ಎಂದು ಕರೆದುಕೊಂಡು ಹೋಗಿದ್ದರು. ಅದರಂತೆ ಏಸ್‌ ವಾಹನದಲ್ಲಿ ತೆರಳಿದ್ದರು. ಇವರ ಜತೆ ಇನ್ನೋರ್ವ ಆರೋಪಿ ಚಾಲಕ ಶಬೀರ್‌ ಕೂಡ ಜತೆಯಾಗಿದ್ದ. ದಾರಿ ಮಧ್ಯೆ ನೆಲ್ಯಾಡಿ ಬಳಿ ಬಾರ್‌ನಲ್ಲಿ ಇಸ್ಮಾಯಿಲ್‌ಗೆ ಮದ್ಯ ಕುಡಿಸಿದ್ದರು. ಅನಂತರ ಮುಂದಕ್ಕೆ ಶಿರಾಡಿ ರಕ್ಷಿತಾರಣ್ಯದ ಕೆಂಪುಹೊಳೆ ತಲುಪಿದಾಗ ವಾಹನ ಕೆಟ್ಟು ಹೋಯಿತು. ಅಲ್ಲಿ ಆರೋಪಿಗಳು ಮತ್ತೆ ಇಸ್ಮಾಯಿಲ್‌ಅವರಿಗೆ ಮದ್ಯಪಾನ ಮಾಡಿಸಿದರು. ಕಾಡಿನಲ್ಲಿ ಯುವತಿಯೋರ್ವಳು ಇದ್ದಾಳೆ ಎಂದು ಆಮಿಷವೊಡ್ಡಿ ರಾತ್ರಿ 11.30ರ ಸುಮಾರಿಗೆ ಕಾಡಿನ ನಡುವೆ ಕರೆದುಕೊಂಡು ಹೋಗಿ ತಾವು ತಂದಿದ್ದ ಚೂರಿಯಿಂದ ಇಸ್ಮಾಯಿಲ್‌ ಅವರನ್ನು ಇರಿದು ಕೊಲೆ ಮಾಡಿದ್ದರು. ಮೃತದೇಹವನ್ನು ಅಲ್ಲಿಯೇ ತಗ್ಗಾದ ಸ್ಥಳದಲ್ಲಿಟ್ಟು ತರೆಗೆಲೆ, ಮಣ್ಣು ಹಾಕಿ ಮುಚ್ಚಿಟ್ಟಿದ್ದರು. ವಾಹನವನ್ನು ಮರಳಿ ಉಪ್ಪಿನಂಗಡಿ ಬಜತ್ತೂರಿನ ನೀರಕಟ್ಟೆಗೆ ತಂದು ನಿಲ್ಲಿಸಿದ್ದರು. ಇಸ್ಮಾಯಿಲ್‌ನ ಮೊಬೈಲ್‌ ಮತ್ತು ಬಟ್ಟೆಯನ್ನು ತಂದು ನೇತ್ರಾವತಿ ನದಿಗೆ ಎಸೆದಿದ್ದರು.


ಪತ್ನಿಯಿಂದ ನಾಪತ್ತೆ ದೂರು
ಒಂದೆಡೆ ಸುಪಾರಿಯ ಹಣವನ್ನು ನೀಡುವುದಕ್ಕಾಗಿ ಚಿನ್ನವನ್ನು ಗಿರವಿ ಇಟ್ಟ ನೆಬಿಸಾ, ಇನ್ನೊಂದೆಡೆ ಪತಿ ಇಸ್ಮಾಯಿಲ್‌ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಗೆ ದೂರು ನೀಡಿದ್ದಳು.
ಪ್ರಕರಣದಲ್ಲಿ ಪ್ರಾಸಿಕ್ಯೂಶನ್‌ ಪರವಾಗಿ ಆರಂಭದಲ್ಲಿ ಸರಕಾರಿ ಅಭಿಯೋಜಕರಾದ ವಿ.ಶೇಖರ ಶೆಟ್ಟಿ ವಾದ ನಡೆಸಿದ್ದರು. ಅನಂತರ ಸರಕಾರಿ ಅಭಿಯೋಜಕರಾದ ಚೌಧರಿ ಮೋತಿಲಾಲ್‌ ಅವರು ವಾದ ಮಂಡಿಸಿದ್ದರು. ಸರಕಾರಿ ಅಭಿಯೋಜಕರಾದ ಜುಡಿತ್‌ ಎಂ.ಒ.ಕ್ರಾಸ್ತಾ ಮತ್ತು ಜ್ಯೋತಿ ಪಿ. ನಾಯಕ್‌ ಅವರು ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಕೊಣಾಜೆ ಠಾಣೆಯ ಇನ್‌ಸ್ಪೆಕ್ಟರ್‌ ಅಶೋಕ್‌ ಪಿ. ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button