ಮಂಗಳೂರಿನಿಂದ ಅರ್ಧದಲ್ಲಿ ಹೋದ ಕೊರಗು ಈಗಲೂ ಇದೆ| ವೈವಿಧ್ಯತೆಯನ್ನು ಆಚರಿಸುವುದೇ ಭಾರತದ ಸಂಸ್ಕೃತಿ: ಸಂಸದ ಸಸಿಕಾಂತ್ ಸೆಂಥಿಲ್

ಮಂಗಳೂರು: ಐಎಎಸ್ ಸೇವೆಯಲ್ಲಿ ಇರುವಾಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಾನಕ್ಕೆ ಅರ್ಧದಲ್ಲಿಯೇ ರಾಜೀನಾಮೆ ಕೊಟ್ಟು ಹೋದ ಕೊರಗು ಈಗಲೂ ಇದೆ. ಈ ನಿಟ್ಟಿನಲ್ಲಿ ಮಂಗಳೂರು ಸದಾ ನನ್ನ ನೆನಪಿನಲ್ಲಿ ಇದೆ. ಮಂಗಳೂರು ಎಂದರೆ ಮಿನಿ ಭಾರತದಂತೆ. ಇಲ್ಲಿ ವಿವಿಧ ಭಾಷೆ, ಸಂಸ್ಕೃತಿಯ ಜನ ವಾಸಿಸುತ್ತಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಸಂಸದ ಸಸಿಕಾಂತ್ ಸೆಂಥಿಲ್ ಮಂಗಳೂರನ್ನು ಹಾಡಿ ಹೊಗಳಿದ್ದಾರೆ.
ಸಂತ ತೆರೆಸಾ ವಿಚಾರ ವೇದಿಕೆ ಮಂಗಳೂರು ವತಿಯಿಂದ ನಗರದ ಪುರಭವನದಲ್ಲಿ ನಡೆದ ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.


ಈ ದೇಶದಲ್ಲಿ ಸಂವಿಧಾನದಿಂದಾಗಿ ಸಮಾನತೆ ಬಂದಿದೆ. ಅದರೆ ಸಮಾನತೆಯನ್ನು ಇಂದು ಕೆಲವರು ವಿರೋಧಿಸುತ್ತಿದ್ದಾರೆ. ಅಂದೂ ಕೆಲವರು ವಿರೋಧಿಸಿದ್ದರು ಎಂದು ಸೆಂಥಿಲ್ ಹೇಳಿದರು.
ಈ ದೇಶದಲ್ಲಿ ಬ್ರಿಟೀಷರ ವಿರುದ್ಧ ಕೇವಲ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆದಿಲ್ಲ.‌ ಸಮಾನತೆಗಾಗಿಯೂ ಹೋರಾಟ ನಡೆದಿದೆ ಎಂದು ಅವರು ಹೇಳಿದರು.


ಸಂವಿಧಾನ ರಚನೆಯಾಗುವಾಗ ವಿವಿಧ ಜಾತಿ, ಧರ್ಮ, ಸಂಸ್ಕೃತಿಗಳ ಜನ ಒಟ್ಟಾಗಿ ಜೀವಿಸಬಹುದೇ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಈ ದೇಶದ ವಿವಿಧತೆಯನ್ನು ಸಂಭ್ರಮಿಸುವುದೇ ಈ ದೇಶದ ವಿಚಾರಧಾರೆ ಎಂದು ಸೆಂಥಿಲ್ ಹೇಳಿದರು. ಈ ವಿಭಿನ್ನತೆಯನ್ನು ಆಚರಿಸುವಾಗ ಸಿಗುವ ಖುಷಿಯೇ ಬೇರೆ. ಹಾಗಾಗಿ ಪ್ರತಿಯೊಬ್ಬರೂ ವೈವಿಧ್ಯತೆಯನ್ನು ಸಹಿಸುವುದಕ್ಕಿಂತ ಸಂಭ್ರಮಿಸಬೇಕಿದೆ ಎಂದು ಅವರು ಹೇಳಿದರು.


ಇನ್ನು ಈ ದೇಶದಲ್ಲಿ ಬಹುಸಂಖ್ಯಾರು ಮತ್ತು ಅಲ್ಪ ಸಂಖ್ಯಾತರೆಂದು ವರ್ಗೀಕರಿಸಲಾಗಿದೆ. ಆದರೆ ನನ್ನ ಪ್ರಕಾರ ಈ ದೇಶದ ಸಮಾನತೆ, ಸಹಬಾಳ್ವೆ, ಸಂವಿಧಾನದಲ್ಲಿ ನಂಬಿಕೆ ಇರಿಸಿದವರೇ ಈ ದೇಶದ ಬಹುಸಂಖ್ಯಾತರು. ಉಳಿದವರು ಅಲ್ಪಸಂಖ್ಯಾತರು. ಇಂತಹ ಅಲ್ಪ ಸಂಖ್ಯಾತರ ಕೈಗೆ ದೇಶವನ್ನು ಕೊಡಬೇಡಿ ಎಂದು ಅವರು ಹೇಳಿದರು.

Latest Indian news

Popular Stories