ಸೋಮವಾರದ ಒಳಗೆ ಬರ ಪರಿಹಾರ ಬಿಡುಗಡೆ ಮಾಡಲು ಒಪ್ಪಿದ ಕೇಂದ್ರ; ರಾಜ್ಯ ಸರ್ಕಾರದ ಹೋರಾಟಕ್ಕೆ ಸಂದ ಜಯ

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ಘೋಷಣೆ ಮಾಡಿಲ್ಲ. ಹೀಗಾಗಿ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟ ಸರ್ಕಾರ ರಿಟ್ ಅರ್ಜಿ ಸಲ್ಲಿಸಿದೆ. ಇಂದು (ಏ.22) ಸುಪ್ರೀಂಕೋರ್ಟ್​ ಅರ್ಜಿ ವಿಚಾರಣೆ ನಡೆಸಿತು.

ಸುಪ್ರೀಂಕೋರ್ಟ್​ನ ನ್ಯಾ.ಬಿ.ಆರ್.ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ಇಂದು (ಏ.22) ಅರ್ಜಿ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್​​​​ ವೆಂಕಟರಮಣಿ ವಾದ ಮಂಡಿಸಿದರು.

ಬರ ಪರಿಹಾರ ಸಂಬಂಧ ಚುನಾವಣಾ ಆಯೋಗದ ಅನುಮತಿ ಕೇಳಿದ್ದೇವೆ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯಬಹುದು. ಸೋಮವಾರದ ಒಳಗೆ ಬರ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್​​​​ ವೆಂಕಟರಮಣಿ ನ್ಯಾಯ ಪೀಠಕ್ಕೆ ಹೇಳಿದರು. ಇನ್ನು ಹಿರಿಯ ವಕೀಲರ ಅಲಭ್ಯತೆ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ರಾಜ್ಯ ಸರಕಾರದ ಪರ ವಕೀಲರು ಕೇಳಿಕೊಂಡ‌ರು. ವಾದ-ಪ್ರತಿವಾದವನ್ನು ಆಲಿಸಿದ ದ್ವಿಸದಸ್ಯ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್​ 29ಕ್ಕೆ ಮುಂದೂಡಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಭೈರೇಗೌಡ 2023ರ ಡಿಸೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ರಾಜ್ಯದಲ್ಲಿ 236 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟ ಆಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದ್ದರು.

Latest Indian news

Popular Stories