ಚಂಡೀಗಢ ಮೇಯರ್ ಚುನಾವಣಾಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ “ಕುದುರೆ ವ್ಯಾಪಾರ ನಡೆದಿದೆ” ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಮೇಯರ್ ಚುನಾವಣೆಯ ಮತಪತ್ರಗಳನ್ನು ಮತ್ತು ಮತ ಎಣಿಕೆಯ ದಿನದ ಸಂಪೂರ್ಣ ವೀಡಿಯೊ-ರೆಕಾರ್ಡಿಂಗ್ ಅನ್ನು ಮಂಗಳವಾರ ಪರಿಶೀಲಿಸುವುದಾಗಿ ಹೇಳಿದೆ. ಅಲ್ಲದೆ ದಾಖಲೆಗಳನ್ನು ಸುರಕ್ಷಿತವಾಗಿ ದೆಹಲಿಗೆ ತರಲು ನ್ಯಾಯಾಂಗ ಅಧಿಕಾರಿಯನ್ನು ನಿಯೋಜಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶನ ನೀಡಿದೆ.

ಇದೇ ವೇಳೆ ಫೆಬ್ರವರಿ 5 ರಂದು, ಮೇಯರ್ ಚುನಾವಣೆ ನಡೆಸಿದ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಅಧಿಕಾರಿ ಮತ ಪತ್ರಗಳನ್ನು ತಿದ್ದಿರುವುದು ಸ್ಪಷ್ಟವಾಗಿದೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಧಿಕಾರಿಯ ಈ ಕ್ರಮ “ಕೊಲೆ”ಗೆ ಸಮ ಮತ್ತು ಪ್ರಜಾಪ್ರಭುತ್ವದ “ಅಪಹಾಸ್ಯ” ಎಂದು ಕಿಡಿ ಕಾರಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೈಕೋರ್ಟ್ ನೇಮಿಸುವ ನ್ಯಾಯಾಂಗ ಅಧಿಕಾರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಚಂಡೀಗಢ ಆಡಳಿತಕ್ಕೆ ನಿರ್ದೇಶನ ನೀಡಿದೆ.

ನಾವೇ ಮಧ್ಯಾಹ್ನ 2 ಗಂಟೆಗೆ ದಾಖಲೆಗಳನ್ನು ಪರಿಶೀಲಿಸುತ್ತೇವೆ” ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅನುಸಾರವಾಗಿ ಮಸಿಹ್ ಪೀಠದ ಮುಂದೆ ಹಾಜರಾಗಿದ್ದು, ಕೆಲವು ಮತಪತ್ರಗಳನ್ನು ತಿರುಚಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಮರುಚುನಾವಣೆ ನಡೆಸುವ ಬದಲು ರಿಟರ್ನಿಂಗ್‌ ಅಧಿಕಾರಿ ಮಾಡಿದ ಗುರುತುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮತಪತ್ರಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು ಎಂದು ಹೇಳಿದೆ.

ಭಾರೀ ವಿವಾದ ಸೃಷ್ಟಿಸಿದ್ದ ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಎಂಟು ಮತಪತ್ರಗಳನ್ನು ಅಧಿಕಾರಿ ಅಸಿಂಧು ಎಂದು ಘೋಷಿಸಿದ ಪರಿಣಾಮ ಸ್ಪಷ್ಟ ಬಹುಮತವಿರುವ ಹೊರತಾಗಿಯೂ ಆಪ್‌ ಅಭ್ಯರ್ಥಿ ಸೋಲುಂಡು ಬಿಜೆಪಿ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಗಿತ್ತು.

Latest Indian news

Popular Stories