ಚಿಕ್ಕಮಗಳೂರು: ಚಿಕ್ಕಮಗಳೂರಿನ 34 ಮಂಗಗಳ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ ಮಂಗನ ಕಾಯಿಲೆ(ಕೆಎಫ್‌ಡಿ) ವೈರಸ್ ಸೋಂಕು ತಗುಲಿರುವ ಕುರಿತು ಶಂಕೆಗಳು ವ್ಯಕ್ತವಾಗತೊಡಗಿವೆ.
ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶವನ್ನು ಸ್ವಚ್ಛಗೊಳಿಸಿ ಶಿವಮೊಗ್ಗ ಮೂಲದ ಕೆಎಫ್‌ಡಿ ಸಂಶೋಧನಾ ಕೇಂದ್ರಕ್ಕೆ ಮಾದರಿಗಳನ್ನು ಕಳುಹಿಸಲಾಗಿದೆ ಎಂದು ಎನ್‌ಆರ್ ಪುರ ತಾಲೂಕಿನ ಡಾ.ವಿಜಯಕುಮಾರ್ ಅವರು ತಿಳಿಸಿದ್ದಾರೆ.
ಅಗತ್ಯವಿದ್ದರೆ, ಮಾದರಿಗಳನ್ನು ಪುಣೆ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗುವುದು. ಸ್ಥಳದಲ್ಲಿ ಮೆಲಥಿಯಾನ್ ಪುಡಿಯನ್ನು ಸಿಂಪಡಿಸಲಾಗಿದ್ದು, ಜನರಿಗೆ ಡಿಇಎಫ್ ಎಣ್ಣೆಯನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಅರಣ್ಯಾಧಿಕಾರಿ ರಂಗನಾಥ್ ಅವರು ಘಟನೆಯ ಕುರಿತು ಎನ್ಆರ್ ಪುರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಟೈರ್ ಗುರುತುಗಳ ಆಧಾರದ ಮೇಲೆ ಟ್ರಕ್‌ನಿಂದ ಮಂಗಗಳನ್ನು ರಸ್ತೆಗೆ ಎಸೆಯಲಾಗಿದ್ದು, ವಾಹನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಮಂಗನ ಜ್ವರ’ ಎಂದೂ ಕರೆಯಲ್ಪಡುವ ಕೆಎಫ್‌ಡಿ ಪ್ರಕರಣಗಳು ಶಿವಮೊಗ್ಗ ಜಿಲ್ಲೆಯ ಪಕ್ಕದ ತಾಲ್ಲೂಕುಗಳಲ್ಲಿ ವರದಿಯಾಗಿದ್ದು, ಎನ್ಆರ್ ಪುರ ಶಿವಮೊಗ್ಗಕ್ಕೆ ಬಹಳ ಹತ್ತಿರದಲ್ಲಿದ್ದು, ಈ ಹಿನ್ನೆಲೆಯಲ್ಲಿ ಶಂಕೆಗಳು ವ್ಯಕ್ತವಾಗಿದೆ.
ಕೊಪ್ಪ ಉಪವಿಭಾಗದ ಎಸಿಎಫ್ ಜಿ.ಕೆ.ಸುದರ್ಶನ್ ಮಾತನಾಡಿ, ಪರೀಕ್ಷೆಗಾಗ ಶಿವಮೊಗ್ಗಕ್ಕೆ ಮೂರ್ನಾಲ್ಕು ಮಂಗಗಳನ್ನು ಮಾತ್ರ ಕಳುಹಿಸಲಾಗಿದೆ. ಅರಣ್ಯ ಇಲಾಖೆ ನಿಯಮ ಪ್ರಕಾರ ಎಲ್ಲಾ ಕೋತಿಗಳ ಶವಗಳ 2 ಮಾದರಿಗಳನ್ನು ಕಳುಹಿಸಬೇಕು. ಕೆಲವೊಮ್ಮೆ ಸಿಸಿಎಂಬಿ, ಹೈದರಾಬಾದ್ ಅಥವಾ ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್ ಅಥವಾ ಕೋರಮಂಗಲದಲ್ಲಿರುವ ಸಂಶೋಧನಾ ಕೇಂದ್ರಕ್ಕೆ ಕಳುಹಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.