ಚಿತ್ರದುರ್ಗ: ನಗರದ ಹೊರವಲಯದಲ್ಲಿರುವ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಈ ನಡುವೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 100ರ ಗಡಿ ದಾಟಿದೆ.
ಚಿತ್ರದುರ್ಗದ ವಡ್ಡರಸಿದ್ದವ್ವನಹಳ್ಳಿಯ ಪ್ರವೀಣ್ (25) ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಈ ಮಧ್ಯೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.
ಈ ನಡುವೆ ಕಲುಷಿತ ನೀರು ಸೇವಿಸಿ ಅಸುನೀಗಿದ್ದ ಮಂಜುಳಾ ಅಂತ್ಯ ಸಂಸ್ಕಾರ ಮಾಡಲು ಪೋಷಕರು ಬೆಳಿಗ್ಗೆ ನಿರಾಕರಿಸಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪರಿಹಾರ ನೀಡದ ಹೊರತು ಅಂತ್ಯ ಸಂಸ್ಕಾರ ಮಾಡುವುದಿಲ್ಲವೆಂದು ಕುಟುಂಬಸ್ಥರು ಬಿಗಿಪಟ್ಟು ಹಿಡಿದ್ದರು.
ಮಧ್ಯಾಹ್ನ ವೇಳೆಗೆ ಜಿಲ್ಲಾಧಿಕಾರಿ ದಿವ್ಯಾಪ್ರಭು, ಎಸ್ಪಿ ಪರಶುರಾಂ ಮೃತ ಮಂಜುಳಾ ನಿವಾಸಕ್ಕೆ ಆಗಮಿಸಿ ಪೋಷಕರು, ಪತಿ ಹಾಗೂ ಹರಳಯ್ಯ ಸ್ವಾಮೀಜಿಯೊಂದಿಗೆ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಅಂತಿಮವಾಗಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.
ಏತನ್ಮಧ್ಯೆ ಕಲುಷಿತ ನೀರು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ವರದಿ ಪಡೆಯಲು 4 ಮಂದಿ ಅಧಿಕಾರಿಗಳ ಸಮಿತಿ ನಿಯೋಜಿಸಲಾಗಿದೆ.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ನಗರಸಭೆ ಪೌರಾಯುಕ್ತರು, ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ.
ಇನ್ನು ಘಟನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.