ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕನ ಬಾಯಿ ಶುದ್ಧ ಮಾಡಿ: BJPಗೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಾಯ್ತೆಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ನಂತರ ಊರಿಗೆ ಬುದ್ದಿ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.

ಕಸ ವಿಲೇವಾರಿ ಗುತ್ತಿಗೆದಾರ ಚಲುವರಾಜು ಎಂಬುವರಿಗೆ ಶಾಸಕ ಮುನಿರತ್ನ ಅವಾಚ್ಯವಾಗಿ ನಿಂದಿಸಿರುವ ಆಡಿಯೋ ಬಯಲಾದ ಬೆನ್ನಲ್ಲೇ, ಮುನಿರತ್ನ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದು, ಶಾಸಕರನ್ನು ಬಂಧನಕ್ಕೊಳಪಡಿಸಲಾಗಿದೆ.

ಈ ಪ್ರಕರಣ ಸಂಬಂದ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಯ್ತೆಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ನಂತರ ಊರಿಗೆ ಬುದ್ದಿ ಹೇಳಿ. ಬಿಜೆಪಿಯವರ ಹಿಂದೂ ನಾವೆಲ್ಲ ಒಂದು ಎಂಬ ಘೋಷವಾಕ್ಯ ಬರೀ ಚುನಾವಣಾ ಕಾಲಕ್ಕಷ್ಟೇ ಸೀಮಿತ. ಚುನಾವಣೆ ಮುಗಿದರೆ ಈ ನಾಡಿನ ದಲಿತರು, ಶೋಷಿತರನ್ನು ಅವರು ಹಿಂದೂವಾಗಿ, ತಮ್ಮಲ್ಲಿ ಒಬ್ಬನಾಗಿ ಕಾಣರು. ಈ ಸಮುದಾಯಗಳ ಬಗ್ಗೆ ಬಿಜೆಪಿ ನಾಯಕರ ಮನಸ್ಸಿನಲ್ಲಿ ತುಂಬಿರುವ ದ್ವೇಷ, ಅಸೂಯೆ, ಅಸಹನೆಗೆ ಮುನಿರತ್ನ ಬಾಯಿಂದ ಉದುರಿದ ಅಣಿಮುತ್ತುಗಳು ಸಾಕ್ಷಿ.

ವೈರಲ್‌ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ, ಆತನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇವೆಲ್ಲವೂ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ. ಶೇ.40 ಕಮಿಷನ್‌ ಸರ್ಕಾರ ತೊಲಗಿದರೂ ಅದರಿಂದ ಹುಟ್ಟಿರುವ ರಕ್ತಬೀಜಾಸುರರು ಉಳಿದಿದ್ದಾರೆ. ಈಗ ನಾವು ಕೈಗೆತ್ತಿಕೊಂಡಿರುವ ಸ್ವಚ್ಚತಾ ಅಭಿಯಾನದಲ್ಲಿ ಈ ಹೊಲಸನ್ನು ಎಲ್ಲಿ ಇಡಬೇಕು ಅಲ್ಲಿಗೆ ಖಂಡಿತಾ ತಲುಪಿಸುತ್ತೇವೆ.

ಮಾದ್ಯಮಗಳ ಮುಂದೆ ನಿಂತು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಉಪದೇಶ ಕೊಡುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ತಮ್ಮದೇ ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ಎದುರು ನಿಂತು ಮಾತನಾಡುವ ಧೈರ್ಯ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಈಗ ಬಿಜೆಪಿ ನಾಯಕರಿಗೆ ಉಳಿದಿರುವುದು ಎರಡೇ ದಾರಿ. ಒಂದು ಮುನಿರತ್ನ ಅವರ ಹೇಳಿಕೆಗೆ ಬೆಂಬಲ ಕೊಟ್ಟು ತಾವು ದಲಿತ ವಿರೋಧಿಗಳು ಎಂದು ಒಪ್ಪಿಕೊಳ್ಳುವುದು, ಇಲ್ಲವೇ ನಾಡಿನ ದಲಿತ ಸಮುದಾಯದವರ ಬಳಿ ಬಹಿರಂಗ ಕ್ಷಮೆ ಕೇಳಿ, ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಗುತ್ತಿಗೆದಾರ ಚಲುವರಾಜು ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ.

ದಲಿತರ ಪ್ರತಿಭಟನೆ

ಎಂಎಲ್ಸಿ ಸುಧಾಮ್ ದಾಸ್ ನೇತೃತ್ವದಲ್ಲಿ ಶನಿವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ದಲಿತ ಮುಖಂಡರು ಬಿಜೆಪಿ ಹಾಗೂ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಮುನಿರತ್ನ ವಿರುದ್ಧ ವಿಶೇಷ ಸರ್ಕಾರಿ ವಕೀಲರನ್ನು ನೇಮಿಸಿ, ಕಠಿಣ ಶಿಕ್ಷೆಯಾಗುವಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜನಪ್ರತಿನಿಧಿಯೊಬ್ಬ ಹೀಗೆ ಮಾತನಾಡುತ್ತಾನೆ ಎನ್ನುವುದು ಅಸಹ್ಯದ ಪರಮಾವಧಿ. ಹೊರ ರಾಜ್ಯದಿಂದ ಬಂದ ಈತ ಕೊಲೆ, ಸುಲಿಗೆ ಸೇರಿದಂತೆ ಅಪರಾಧ ಪ್ರಕರಣಗಳಲ್ಲೇ ಮುಳುಗಿರುವ ವ್ಯಕ್ತಿ ಎಂದು ಹೇಳಿದರು.

ಮುನಿರತ್ನ ಜೈಲಿಗೆ ಹೋಗುವವರೆಗೂ ಸಮುದಾಯ ಪ್ರತಿಭಟನೆ ನಡೆಸಲಿದೆ. ನ್ಯಾಯ ಸಿಗುವವರೆಗೂ ದಲಿತರು ಉಗ್ರ ಹೋರಾಟ ನಡೆಸಲಿದ್ದಾರೆ. ಮುನಿರತ್ನ ವಿರುದ್ಧ ಹಲವು ಪ್ರಕರಣಗಳಿದ್ದು, ಅವರು ಶಾಶ್ವತವಾಗಿ ಜೈಲಿನಲ್ಲಿರಲು ಯೋಗ್ಯರಾಗಿದ್ದಾರೆಂದು ಕಿಡಿಕಾರಿದ್ದಾರೆ.

ದಲಿತ ಮುಖಂಡ ಹೆಣ್ಣೂರು ಶ್ರೀನಿವಾಸ್ ಮಾತನಾಡಿ. ಮಂಗಳವಾರ ವಿವಿಧ ದಲಿತ ಸಂಘಟನೆಗಳ ಸದಸ್ಯರು ರಾಜ್ಯ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ತಿಳಿಸಿದರು.

ಮುನಿರತ್ನ ಅವರು ದಲಿತರು, ಒಕ್ಕಲಿಗರು ಮತ್ತು ಮಹಿಳೆಯರನ್ನು ಅವಮಾನಿಸಿದ್ದಾರೆ ಎಂದು ಮತ್ತೊಬ್ಬ ಮುಖಂಡ ಬಿ.ಗೋಪಾಲ್ ಆರೋಪಿಸಿದರು.

Latest Indian news

Popular Stories