ಗೋವಾದಲ್ಲಿ ಕೋಮು ಸೌಹಾರ್ದ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳು | ಶಾಲಾ ಮುಖ್ಯೋಪಾಧ್ಯಾಯರ ಅಮಾನತು

ಗೋವಾ – ಕೋಮು ಸೌಹಾರ್ದವನ್ನು ಬೆಳೆಸುವ ಪ್ರಯತ್ನದಲ್ಲಿ, ವಾಸ್ಕೋದ ಕೇಶವ ಮೂರ್ತಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯ ಮಸೀದಿಗೆ ಭೇಟಿ ನೀಡುವಂತೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) ಮೂಲಕ ಆಹ್ವಾನವನ್ನು ನೀಡಲಾಗಿತ್ತು. ಆದರೆ ಇದೀಗ ಈ ನಡೆ ವಿವಾದವನ್ನು ಹುಟ್ಟುಹಾಕಿದೆ, ಶಾಲೆಯ ಪ್ರಾಂಶುಪಾಲರಾದ ಶಂಕರ್ ಗಾಂವ್ಕರ್ ಅವರನ್ನು ಇದಕ್ಕೆ ಸಂಬಂಧಿಸಿದಂತೆ ಅಮಾನತುಗೊಳಿಸಲಾಗಿದೆ.

ಮಸೀದಿಗೆ ವಿದ್ಯಾರ್ಥಿಗಳ ಭೇಟಿಗೆ ವಿರೋಧ ವ್ಯಕ್ತಪಡಿಸಿ ಬಲಪಂಥೀಯ ಸಂಘಟನೆಯ ಸದಸ್ಯರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ಉಲ್ಬಣಗೊಂಡಿತು, ಅಂತಿಮವಾಗಿ ಪ್ರಾಂಶುಪಾಲ ಗಾಂವ್ಕರ್ ಅವರನ್ನು ಅಮಾನತುಗೊಳಿಸಲಾಯಿತು.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್‌ಐಒ) ಪರಿಸ್ಥಿತಿಯ ಕುರಿತು ಸ್ಪಷ್ಟೀಕರಣ ನೀಡಿ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಸಮುದಾಯದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಕಳೆದ ಒಂದು ದಶಕದಿಂದ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಾಗಿ ಸ್ಪಷ್ಟ ಪಡಿಸಿದರು.

ನಂತರ ಕೇಶವ ಮೂರ್ತಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಪ್ರಾಂಶುಪಾಲ ಗಾಂವ್ಕರ್ ಅವರನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿ ಬೀದಿಗಿಳಿದಿದ್ದಾರೆ. ಅವರ ಅಮಾನತು ಅನ್ಯಾಯ ಮತ್ತು ಅನಗತ್ಯ ಎಂದು ಹೇಳಿದ್ದಾರೆ.

ವಿವಾದಕ್ಕೆ ಪ್ರತಿಕ್ರಿಯೆಯಾಗಿ, SIO ನ ಗೋವಾ ರಾಜ್ಯ ಕಾರ್ಯದರ್ಶಿ ಯೂನಸ್ ಮಾತನಾಡಿ, ಯುವಜನರಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಹರಡುವುದು ತಮ್ಮ ಸಂಘಟನೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಸದ್ಯಕ್ಕೆ, ಎಸ್‌ಐಒ ವಿರುದ್ಧ ಯಾವುದೇ ಔಪಚಾರಿಕ ಕಾನೂನು ಪ್ರಕರಣ ದಾಖಲಾಗಿಲ್ಲ. ಆದರೆ ನಡೆಯುತ್ತಿರುವ ವಿಚಾರಣೆಗೆ ಸಹಕರಿಸುವಂತೆ ಪೊಲೀಸರು ಕರೆ ನೀಡಿದ್ದಾರೆ.

ಕೋಮು ಸೌಹಾರ್ದ ಅಭಿಯಾನದ ಕುರಿತು ಸಮುದಾಯವು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವುದರಿಂದ ಗೋವಾದ ವಾಸ್ಕೋದಲ್ಲಿ ಪರಿಸ್ಥಿತಿಯು ಉದ್ವಿಗ್ನವಾಗಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ.

Latest Indian news

Popular Stories