ಕಚೇರಿಯಿಂದ ಡಾ ಬಿ.ಆರ್ ಅಂಬೇಡ್ಕರ್ ಹಾಗೂ ವಾಲ್ಮೀಕಿ ಫೋಟೊ ತೆಗೆಸಿದ ಜೋಶಿ – ಕಾಂಗ್ರೆಸ್ ಆರೋಪ

“ಸಂಘ ಪರಿವಾರದ ಮುದ್ದಿನ ಕೂಸಾದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ತಮ್ಮೊಳಗಿನ ಲಿಂಗಾಯತ, ದಲಿತ, ಹಿಂದುಳಿದ ವರ್ಗಗಳ ಮೇಲಿನ ದ್ವೇಷವನ್ನು ಮಹನೀಯರ ಫೋಟೋವನ್ನು ಹೊರಹಾಕುವ ಮೂಲಕ ವ್ಯಕ್ತಪಡಿಸಿದ್ದಾರೆ” ಎಂದು ಕಾಂಗ್ರೆಸ್‌ ಆರೋಪಿಸಿದೆ.

ಇದರೊಂದಿಗೆ ಕಾಂಗ್ರೆಸ್ ಒಂದು ವೀಡಿಯೊವನ್ನು ಟ್ವೀಟ್ ಮಾಡಿದೆ. ಆ ವೀಡಿಯೊದಲ್ಲಿ ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಇಡಲಾಗಿದ್ದ ಡಾ ಬಿ.ಆರ್ ಅಂಬೇಡ್ಕರ್ ಹಾಗೂ ವಾಲ್ಮೀಕಿಯವರ ಫೋಟೋಗಳನ್ನು ವ್ಯಕ್ತಿಯೊಬ್ಬ ತೆಗೆದು ಒಳಗೆ ತೆಗೆದುಕೊಂಡು ಹೋಗುವುದನ್ನು ತೋರಿಸಲಾಗಿದೆ. ಬಿಜೆಪಿ ನಾಯಕರಾದ ದೀನ್ ದಯಾಳ್ ಉಪಾಧ್ಯಾಯ , ಶ್ಯಾಮ್ ಪ್ರಸಾದ್ ಮುಖರ್ಜಿ ಹಾಗು ಭಾರತ ಮಾತೆಯ ಫೋಟೋಗಳ ಜೊತೆ ಇದ್ದ ಅಂಬೇಡ್ಕರ್ ಹಾಗು ವಾಲ್ಮೀಕಿ ಫೋಟೋಗಳನ್ನು ಮಾತ್ರ ಆ ವ್ಯಕ್ತಿ ತೆಗೆದು ಒಳಗೆ ತೆಗೆದುಕೊಂಡು ಹೋಗುವುದು ವೀಡಿಯೋದಲ್ಲಿ ಕಾಣಿಸುತ್ತದೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರಸ್‌, ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಅಂಬೇಡ್ಕರ್ ಕಂಡರೆ ಕೋಪ, ಬಸವಣ್ಣನ ಕಂಡರೆ ದ್ವೇಷ, ವಾಲ್ಮೀಕಿಯನ್ನು ಕಂಡರೆ ಅಸಹನೆ ಇದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಅಡಿಯಲ್ಲೇ ಚುನಾವಣೆ ನಿಂತಿದ್ದರೂ ಅಂಬೇಡ್ಕರ್ ರನ್ನು ಆಚೆ ಎಸೆಯುವ ಸಂಘದ ಮನಸ್ಥಿತಿಯನ್ನು ನಾಡಿನ ಜನತೆ ಸಹಿಸುವುದಿಲ್ಲ. ಬಿಜೆಪಿ ಹಾಗೂ ಜೋಷಿಯ ದುರಹಂಕಾರ ಪರಮಾವಧಿಗೆ ತಲುಪಿದೆ, ಜನತೆ ಬಿಜೆಪಿಯನ್ನು ಹೆಸರಿಲ್ಲದಂತೆ ನಿರ್ನಾಮ ಮಾಡಲಿದ್ದಾರೆ ಎಂದು ಕಾಂಗ್ರೆಸ್‌ ಎಚ್ಚರಿಸಿದೆ.

Latest Indian news

Popular Stories