ಟಿಕೆಟ್ ತಪ್ಪಿಸಲು ಉಡುಪಿ ಚಿಕ್ಕಮಗಳೂರಿನಲ್ಲಿ ಪಿತೂರಿ: ಬೆಳಗಾವಿಯಲ್ಲಿ ಶೋಭಾ ಕರಂದ್ಲಾಜೆ

ಬೆಳಗಾವಿ, ಮಾರ್ಚ್​ 9: ಲೋಕಸಭೆ ಚುನಾವಣೆಯ ಟಿಕೆಟ್ ತಪ್ಪಿಸಲು ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ (Udupi Chikkamagaluru Lok Sabha Constutiency) ಪಿತೂರಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ಯಾವಗ ವಿರೋಧ ವ್ಯಕ್ತವಾಗುತ್ತದೆಯೋ ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ ಆಗಿದೆ. ಇಲ್ಲವಾದರೆ ಶೋಭಾ ಒಳ್ಳೆಯ ‌ಕೆಲಸ ಮಾಡ್ತಿದ್ದಾರೆ,‌ ಪಕ್ಷದ ಕೆಲಸ ಮಾಡುತ್ತಾರೆ ಎಂದಷ್ಟೇ ‌ಹೇಳುತ್ತಿದ್ದರು ಎಂದು ಹೇಳಿದ್ದಾರೆ.

ಶೋಭಾರನ್ನು ಏಕೆ ವಿರೋಧ ಮಾಡ್ತಿದ್ದಾರೆ ಎಂದು ಪಕ್ಷದ ನಾಯಕರೂ ಮಾಹಿತಿ ಕಲೆ ಹಾಕ್ತಿದ್ದಾರೆ. ಆಗಲೇ ಸತ್ಯ ಗೊತ್ತಾಗೋದು, ನಮ್ಮ ವ್ಯಕ್ತಿತ್ವವೇನು? ನಮ್ಮ ಅಭಿವೃದ್ಧಿ ಕೆಲಸಗಳು ಏನೆಂಬುದು ಗೊತ್ತಾಗುತ್ತವೆ. ಚುನಾವಣೆ ಸಮಯ ಬಹಳಷ್ಟು ಸೂಕ್ಷ್ಮತೆಯಿಂದ ಕೂಡಿರುತ್ತದೆ. ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗಲಿದೆಯೇ ಹೊರತು ಕೆಟ್ಟದಾಗಲ್ಲ. ಅದಕ್ಕಾಗಿ ನಮ್ಮ ಹೈಕಮಾಂಡ್‌ ಬಗ್ಗೆ ನನಗೆ ನಂಬಿಕೆಯಿದೆ, ಕೆಲಸದ ಆಧಾರದ ಮೇಲೆ ಟಿಕೆಟ್ ಸಿಗುತ್ತದೆ ಎಂದು ಶೋಭಾ ಭರವಸೆ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕೆಲಸ ಕೊಡಲಿ, ಸರ್ಕಾರದ ಕೆಲಸ ಕೊಡಲಿ ಪ್ರಮಾಣಿಕ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ಇದು ಎಲ್ಲರಿಗೂ ಅನ್ವಯ ಆಗುತ್ತದೆ. ಕೆಲಸ ಮಾಡಿದವರಿಗೆ ಅವಕಾಶ ಸಿಕ್ಕಿಯೇ ಸಿಗುತ್ತದೆ. ಜಾತಿ ಸಮೀಕರಣ ಕಾರಣಕ್ಕೆ ಕೆಲ ಸಂದರ್ಭದಲ್ಲಿ ಇದು ವ್ಯತ್ಯಾಸ ಆಗಬಹುದಷ್ಟೇ. ನಮ್ಮ ಶ್ರಮ, ನಮ್ಮ ಕೆಲಸವನ್ನು ಹೈಕಮಾಂಡ್ ಗುರುತಿಸುತ್ತೆ ಎಂಬುದಕ್ಕೆ ನಾನೇ ಉದಾಹರಣೆ. ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿಯಿಂದ ನನಗೆ ಅನುಕೂಲ ‌ಆಗಲಿದೆ. ಪಿತೂರಿ ಮಾಡಿದಾಗಲೇ ಹೈಕಮಾಂಡ್‌ ನಮ್ಮ ಬಗ್ಗೆ ಗಮನ ಕೊಡುತ್ತದೆ. ವಿರೋಧ ಏಕೆ ಮಾಡ್ತಿದ್ದಾರೆ ಎಂಬುದರ ವರದಿ ತರಿಸಿಕೊಳ್ಳುತ್ತಾರೆ, ಆಗ ಸತ್ಯ ಗೊತ್ತಾಗುತ್ತದೆ. ನನ್ನ ಕ್ಷೇತ್ರದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ,‌ ಅಭಿವೃದ್ಧಿ ಆಧಾರದ ಮೇಲೆ‌ ಮತ‌ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories