ರಾಜ್ಯ ಕರಾವಳಿಯಲ್ಲಿ 4 ದಿನ ನಿರಂತರ ಮಳೆ; ದಕ್ಷಿಣ ಕನ್ನಡ, ಉಡುಪಿಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ!

ಮಂಗಳೂರು/ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಂಡಿದ್ದು ಬುಧವಾರ ಹಲವೆಡೆ ದಿನವಿಡೀ ಭಾರೀ ಮಳೆ ಸುರಿದಿದೆ. ಇದೇ ವಾತಾವರಣ ಮುಂದಿನ ಮುರ್ನಾಲ್ಕು ದಿನಗಳ ಕಾಲ ಮುಂದುವರಿಯಲಿದ್ದು ಹವಾಮಾನ ಇಲಾಖೆಯು ಜೂನ್ 13ರಿಂದ 16ರವರಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಹಲವೆಡೆ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯನ್ನೂ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಪೆರುವಾಯಿ, ಕನ್ಯಾನ, ಮುಡಿಪು, ಕೋಟೆಕಾರು, ಬೀರಿ, ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಬಂಟ್ವಾಳ, ಮಡಂತ್ಯಾರು, ಪುತ್ತೂರು, ಉಪ್ಪಿನಂಗಡಿ, ಇಳಂತಿಲ, ಕರಾಯ, ಪೆರ್ಣೆ, ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಮೂಡಬಿದರೆ, ಉಳ್ಳಾಲಗಳಲ್ಲಿ ಬುಧವಾರ ಉತ್ತಮ ಮಳೆ ಸುರಿದಿದೆ.

ಇನ್ನು ಉಡುಪಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಸುರಿದ ನಿರಂತರ ಮಳೆಯು ಮನೆ, ಕೃಷಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದೆ. ಕುಂದಾಪುರ, ಬ್ರಹ್ಮಾವರದಲ್ಲಿ ಅಧಿಕ ಮಳೆಯಾಗಿದ್ದು, ಉಡುಪಿ ನಗರ, ಮಲ್ಪೆ ಮತ್ತು ಮಣಿಪಾಲಗಳಲ್ಲಿ ಬಿಟ್ಟು ಬಿಟ್ಟು ಸಾಧಾರಣ ಮಳೆ ಬಿದ್ದಿದೆ.

ಎರ್ಲಪ್ಪಾಡಿಯ ವನಜಾ ಶೆಟ್ಟಿಗಾರ್, ಕೋಣಿ ಗ್ರಾಮದ ನಾಗರತ್ನಾ, ಯಡ್ತರೆಯ ಜಹ್ರೂಬಿ, ಕಾಲ್ತೋಡಿನ ಪುಟ್ಟಮ್ಮ, ಉಳ್ತೂರಿನ ರುಕ್ಕು ಗಾಣಿಗ, ನಾವುಂದದ ಬಾಚಿ, ಅಂಬಲಪಾಡಿಯ ಸತೀಶ್ ಜತನ್ ಎಂಬವವ ಮನೆಗಳಿಗೆ ಮಳೆಯಿಂದಾಗಿ ಹಾನಿಯಾಗಿದೆ. ಇನ್ನು ಕೆಲವೆಡೆ ಭಾನುವಾರದಿಂದಲೂ ನಿರಂತರ ಮಳೆ ಸುರಿಯುತ್ತಿರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಕಡಲಬ್ಬರ ಹೆಚ್ಚಳಗೊಂಡಿದೆ. ಅಲ್ಲಲ್ಲಿ ಮರ ಉರುಳಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ದಕ್ಷಿಣ ಕನ್ನಡ ಪಕ್ಕದ ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಬುಧವಾರವೂ ಮಳೆಯಾಗಿದೆ.. ಮುಂದಿನ ದಿನಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಜೂನ್ 16ರ ತನಕ ಕಾಸರಗೋಡು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿರುವುದಾಗಿ ತಿಳಿಸಿದೆ.

ಅದೇ ರೀತಿಯಲ್ಲಿ ಕೇರಳದ ಮಲಪುತ್ರ್ಪರ, ಕಣ್ಣೂರು ಮತ್ತು ಇತರ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿಗುಡುಗು ಸಹಿತ ಲಘು ಮಳೆಯಾಗುವ ಸಾಧ್ಯತೆಯಿರುವುದಾಗಿಯೂ, ತಿರುವನಂತಪುರ, ಪತ್ತನಂತಿಟ್ಟ, ಆಲಪ್ಪುಯ, ಮಲಪುತ್ರ್ಪರ, ಕೋಝಿಕ್ಕೋಡ್‌, ವಯನಾಡು, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ವಿಶೇಷ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೆರಡರಲ್ಲೂ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಅತ್ತಿಂದಿತ್ತ ಸಂಚರಿಸುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇನ್ನು ಕರಾವಳಿಯಲ್ಲಿ ಮಳೆಗಾಲ ಪ್ರಾರಂಭವಾದೊಡನೆ ಆರೋಗ್ಯದಲ್ಲಿ ಏರುಪೇರು ಆಗುವುದು ಸಾಮಾನ್ಯ. ಶೀತ, ಜ್ವರ ಸೇರಿದಂತೆ ಅನೇಕ ಅನಾರೋಗ್ಯಗಳು ಕಾಣಿಸಿಕೊಳ್ಳಬಹುದು. ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುವುದರಿಂದ ಮಲೇರಿಯಾ ಆತಂಕವೂ ಇರುತ್ತದೆ. ಹೀಗಾಗಿ ಎಲ್ಲೂ ಮಳೆ ನೀರು ನಿಲ್ಲದಂತೆ ಸಾರ್ವಜನಿಕರು ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ.

Latest Indian news

Popular Stories