ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಕಾಂಗ್ರೆಸ್ ಭ್ರಷ್ಟಾಚಾರ ಆರೋಪ ಮಾಡಿದ ಬೆನ್ನಲ್ಲೇ ಹುಬ್ಬಳ್ಳಿಯ ಎಂಟಿಎಸ್ ಕಾಲೋನಿಯ 13 ಎಕರೆ ಜಮೀನಿನ ಟೆಂಡರ್ ಪ್ರಕ್ರಿಯೆಯನ್ನು ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ(RLDA) ಕೊನೆಗೂ ಭಾನುವಾರ ರದ್ದುಗೊಳಿಸಿದೆ.
ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಬಹುಕೋಟಿ ಮೌಲ್ಯದ ಎಂಟಿಎಸ್ ಕಾಲೋನಿಯ 13 ಎಕರೇ ಜಮೀನನ್ನು 99 ವರ್ಷಗಳಿಗೆ ಲೀಸ್ ನೀಡಲು ಟೆಂಡರ್ ಕರೆಯಲಾಗಿತ್ತು. ಈ ಬಗ್ಗೆ ರೈಲ್ವೇ ಭೂಮಿ ಅಭಿವೃದ್ಧಿ ಪ್ರಾಧಿಕಾರವು 13 ಎಕರೇ ಜಮೀನು ಲೀಸ್ಗೆ ಇದೆ ಎಂದು ಬೋರ್ಡ್ ಹಾಕಿತ್ತು. ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೆಸರು ತಳಕು ಹಾಕಿಕೊಂಡಿತ್ತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು 1300 ಕೋಟಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಸರ್ಕಾರಿ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಸ್ಥಳೀಯ ಕಾಂಗ್ರೆಸ್ ನಾಯಕರು ಜೋಶಿ ವಿರುದ್ಧ ಹೋರಾಟ ಮಾಡಿದ್ದರು.
ಈ ಸಂಬಂಧ ಇಂದು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಪ್ರಾಧಿಕಾರ, ವಸತಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಎಂಟಿಎಸ್ ಕಾಲನಿಯ 13 ಎಕರೆ ಜಮೀನನ್ನು 99 ವರ್ಷ ಲೀಸ್ ನೀಡಲು 2023 ನವೆಂಬರ್ 21ಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಹಿಂದಿನ ಐದು ಟೆಂಡರ್‌ಗಳಿಗೆ ಬಿಡ್ಡರ್‌ಗಳು ಆಸಕ್ತಿ ತೋರಿರಲಿಲ್ಲ. ಹೀಗಾಗಿ ಮತ್ತೊಂದು ಬಾರಿಯೂ ಟೆಂಡರ್ ಕರೆಯಲಾಗಿತ್ತು. ಆದರೆ ಆಡಳಿತಾತ್ಮಕ ಕಾರಣಗಳಿಂದ ಈ ಟೆಂಡರ್ ರದ್ದುಪಡಿಸಲಾಗಿದೆ ಮತ್ತು ಪ್ರಾಧಿಕಾರದಿಂದಲೇ ಈ ಭೂಮಿ ಅಭಿವೃದ್ಧಿಪಡಿಸುವ ಕುರಿತು ಪ್ರಾಧಿಕಾರ ಪರಿಶೀಲನೆ ನಡೆಸಲಿದೆ” ಎಂದು ಹೇಳಿದೆ.
1300 ಕೋಟಿ ರೂಪಾಯಿ ಮೌಲ್ಯದ 13 ಎಕರೆ ಭೂಮಿಯನ್ನು ಕೇವಲ 83 ಕೋಟಿ ರೂ. ಮೂಲದರ ಆಧರಿಸಿ 99 ವರ್ಷ ಲೀಸ್ ನೀಡಲು ರೈಲ್ವೆ ಮುಂದಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು, ಪ್ರಹ್ಲಾದ್ ಜೋಶಿ ಅವರು ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಜನವರಿ 18 ರಂದು ಕಾಂಗ್ರೆಸ್ ಪಕ್ಷ ವಿವಾದಿತ ಎಂಟಿಎಸ್ ಕಾಲನಿ ಜಮೀನಿನಲ್ಲಿ ಪ್ರತಿಭಟನೆ ಸಹ ನಡೆಸಿತ್ತು.