ರಾಜ್ಯಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ: ಅಡ್ಡ ಮತದಾನದ ಭೀತಿ, ಶಾಸಕರಿಗೆ ಸಿಎಂ-ಡಿಸಿಎಂ ಕಿವಿಮಾತು

ಬೆಂಗಳೂರು: ರಾಜ್ಯಸಭೆ ಚುನಾವಣೆ ಅಖಾಡಕ್ಕೆ ವೇದಿಕೆ ಸಂಪೂರ್ಣ ಸಜ್ಜಾಗಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಮತದಾನ ಆರಂಭಗೊಳ್ಳಲಿದೆ. ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜ್ಯಸಭೆ ಚುನಾವಣೆಗೆ ತಂತ್ರ ಪ್ರತಿ ತಂತ್ರ ಭರದಿಂದ ಸಾಗಿವೆ.

ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ. ಅಡ್ಡ ಮತದಾನದ ಆತಂಕ ಪಕ್ಷಗಳಿಗೆ ಎದುರಾಗಿದ್ದು, ಈ ಅಡ್ಡ ಮತದಾನದಿಂದ ತಮ್ಮ ಶಾಸಕರನ್ನು ಕಾಪಾಡಿಕೊಳ್ಳುವ ಮುಂಜಾಗ್ರತೆ ಕ್ರಮವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪಂಚತಾರಾ ಹೋಟೆಲ್ ವೊಂದಕ್ಕೆ ಸ್ಥಳಾಂತರಿಸಿದೆ.

ಹೊಟೇಲ್​​ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮತದಾನದ ಬಗ್ಗೆ ಸಿಎಂ, ಡಿಸಿಎಂ ಶಾಸಕರಿಗೆ ಕಿವಿಮಾತು ಹೇಳಿದರು.

ಯಾವ ರೀತಿ ಮತ ಹಾಕಬೇಕು. ಮೂವರು ಕೈ ಅಭ್ಯರ್ಥಿಗಳ ಪೈಕಿ ಯಾರು ಯಾರಿಗೆ ಮತ ಹಾಕಬೇಕು ಎಂಬುದರ ಬಗ್ಗೆ ತಿಳಿಸಲಾಯಿತು. ಮತ ಅಸಿಂಧುವಾಗದಂತೆ ಎಚ್ಚರಿಕೆ ವಹಿಸುವಂತೆಯೂ ಸೂಚನೆ ನೀಡಲಾಯಿತು‌.

ಕಾಂಗ್ರೆಸ್ ಶಾಸಕರಲ್ಲಿ ಹಲವರು ಮೊದಲ‌ ಬಾರಿಗೆ ಶಾಸಕರಾಗಿದ್ದು, ಅವರಿಗೆ ರಾಜ್ಯಸಭೆ ಚುನಾವಣೆಯ ಪ್ರಕ್ರಿಯೆ, ಮತದಾನ ವಿಧಾನದ ಬಗ್ಗೆ ತಿಳಿ ಹೇಳಲಾಯಿತು. ಯಾವುದೇ ಗೊಂದಲ ಇಲ್ಲದೇ ಮತದಾನ‌ ಮಾಡುವಂತೆ ಎಚ್ಚರಿಕೆ ನೀಡಲಾಯಿತು.

ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಹೋಟೆಲ್​​ನಲ್ಲಿ ಕಾಂಗ್ರೆಸ್ ಶಾಸಕರಿಗೆ ರಾಜ್ಯಸಭೆ ಚುನಾವಣೆ ಮತದಾನದ ತರಬೇತಿ ಹಾಗೂ ಅಣಕು ಮತದಾನ ಮಾಡಿಸಲಾಯಿತು. ಅಣಕು ಮತದಾನ ನಡೆಸಿ, ಮಂಗಳವಾರ ಹೋಟೆಲ್​​ನಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ನಮ್ಮ ಶಾಸಕರು ಮತದಾನ ಮಾಡಲಿದ್ದಾರೆ ಎಂದು ತಿಳಿಸಿದರು.

Latest Indian news

Popular Stories