ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಕುರಿತು ಇಂಡಿಯಾ ಮೈತ್ರಿಕೂಟದ ಮಿತ್ರ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿ ಮುಂದುವರೆದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಒಂದೇ ಒಂದು ಸ್ಥಾನವನ್ನೂ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಪುನರುಚ್ಚರಿಸಿದ್ದಾರೆ.
“ನಾವು ಕಾಂಗ್ರೆಸ್ ಪಕ್ಷಕ್ಕೆ ಮಾಲ್ಡಾದಲ್ಲಿ ಎರಡು ಸ್ಥಾನಗಳನ್ನು ನೀಡುವ ಪ್ರಸ್ತಾಪ ಮಾಡಿದ್ದೆವು. ಆದರೆ, ಅವರು ಅದನ್ನು ಒಪ್ಪಲಿಲ್ಲ. ಈಗ ಅವರಿಗೆ ರಾಜ್ಯದಲ್ಲಿ ಒಂದೇ ಒಂದು ಸ್ಥಾನವನ್ನು ಬಿಟ್ಟುಕೊಡುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್‌ವಾದಿ)ದಿಂದಾಗಿ ಕಾಂಗ್ರೆಸ್ ಪಕ್ಷದೊಂದಿಗಿನ ತಮ್ಮ ಉತ್ತಮ ಸಂಬಂಧ ಕ್ರಮೇಣ ಹೇಗೆ ಹದಗೆಟ್ಟಿತು ಎಂಬುದರ ಕುರಿತು ಮಮತಾ ಮಾತನಾಡಿದರು.
ಸಿಪಿಎಂ ಬಿಜೆಪಿಯ ನಂಬರ್ ಒನ್ ಬ್ರೋಕರ್, ನಾನು ಸಿಪಿಎಂನಿಂದ ಸಾಕಷ್ಟು ಹೊಡೆತ ತಿಂದಿದ್ದೇನೆ ಮತ್ತು ಅದನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ನಾನು ಕಾಂಗ್ರೆಸ್‌ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ ಸಿಪಿಎಂನಿಂದಾಗಿ ಕಾಂಗ್ರೆಸ್ ಪಕ್ಷದೊಂದಿಗಿನ ನನ್ನ ಸಂಬಂಧ ಹದಗೆಟ್ಟಿದೆ” ಎಂದರು.
ಈ ಮಧ್ಯೆ, ಪ್ರಮುಖ ಮಿತ್ರ ಟಿಎಂಸಿಯನ್ನು ಇಂಡಿಯಾ ಮೈತ್ರಿಕೂಟದಲ್ಲಿ ಉಳಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್, “ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆಯನ್ನು ತಡೆಹಿಡಿಯಲಾಗಿದೆ. ಟಿಎಂಸಿ ಮತ್ತು ಕಾಂಗ್ರೆಸ್ ಪ್ರಸ್ತಾಪವನ್ನು ಪರಿಗಣಿಸುತ್ತಿವೆ. ಟಿಎಂಸಿ ಇನ್ನೂ ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ” ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.