ದಾವಣಗೆರೆಯಲ್ಲಿ ಕಸ್ಟಡಿ ಸಾವು ಆರೋಪ:  ಮಾನವ ಹಕ್ಕು ಆಯೋಗದಿಂದ ತನಿಖೆಗೆ ಎಪಿಸಿಆರ್ ಆಗ್ರಹ

ದಾವಣಗೆರೆ: ಕರ್ನಾಟಕದ ಚನ್ನಗಿರಿಯ ಟಿಪ್ಪುನಗರದ ನಿವಾಸಿ ಆದಿಲ್ (30) ಎಂಬಾತನ ಕಸ್ಟಡಿ ಸಾವಿನ ಪ್ರಕರಣದ ತುರ್ತು ತನಿಖೆಗೆ ಎಪಿಸಿಆರ್ ಒತ್ತಾಯಿಸಿದೆ.

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಸಂಘಟನೆಯು ಘಟನೆಯ ಬಗ್ಗೆ ಸಂಪೂರ್ಣ, ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದೆ.

APCR ಪ್ರಕಾರ, ಆದಿಲ್ ನನ್ನು ಮೇ 24, 2024 ರಂದು ಪೊಲೀಸರು ಜೂಜಾಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಬಂಧಿಸಿದ್ದರು. ಆದರೆ, ಆ ದಿನ ರಾತ್ರಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆದಿಲ್ ಮೃತಪಟ್ಟಿದ್ದಾನೆ. ಅವರ ಸಾವಿನ ಸುತ್ತಲಿನ ಸನ್ನಿವೇಶಗಳು ಸ್ಥಳೀಯ ಮಟ್ಟದಲ್ಲಿ ಅಶಾಂತಿಯನ್ನು ಹುಟ್ಟುಹಾಕಿದೆ.

ಆದಿಲ್ ಸಾವಿನ ಘೋಷಣೆಯ ನಂತರ, ಹಿಂಸಾತ್ಮಕ ಗುಂಪೊಂದು ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದಾರೆ. ಆದಿಲ್‌ನ ಸಾವಿಗೆ ಪೊಲೀಸರ ದುಷ್ಕೃತ್ಯವೇ ಕಾರಣ ಎಂದು ಜನಸಮೂಹವು ಆರೋಪಿಸಿದೆ. ಜನರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಆರೋಪಗಳ ಗಂಭೀರತೆ ಅರಿತು ಮಾನವ ಹಕ್ಕುಗಳ ಆಯೋಗ ಸಮಗ್ರ ತನಿಖೆಯ ಕೈಗೆತ್ತಿಕೊಳ್ಳಬೇಕು. ಸತ್ಯಾಸತ್ಯತೆಗಳ ತನಿಖೆಯಿಂದ  ಮಾತ್ರ ಆದಿಲ್‌ಗೆ ನ್ಯಾಯ ಸಿಗಲು ಸಾಧ್ಯ ಎಂದು ಸಂಘಟನೆ ಪತ್ರದಲ್ಲಿ ಒತ್ತಾಯಿಸಿದೆ.

Latest Indian news

Popular Stories