CWG 2022: ಕೊನೆಗೂ ಚಿನ್ನ ಗೆದ್ದು ಬೀಗಿದ ಪಿವಿ ಸಿಂಧು, ಭಾರತದ ಖಾತೆಯಲ್ಲಿ 55 ಪದಕ!

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಆಟಗಾರರ ಪದಕ ಬೇಟೆ ಮುಂದುವರೆದಿದ್ದು ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ. 

ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಕೆನಡಾ ಆಟಗಾರ್ತಿ ಮಿಚೆಲ್ ಲೀ ವಿರುದ್ಧ 21-15, 21-13 ಅಂತರದ ಸೆಟ್ ಗಳಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. 

ಸಿಂಧು ಇದುವರೆಗೆ ಭಾರತದ ಸಿಂಗಲ್ಸ್ ನಲ್ಲಿ ಹೆಚ್ಚು ಸಾಧನೆ ಮಾಡಿರುವ ಆಟಗಾರ್ತಿಯಾಗಿದ್ದು  ಫೈನಲ್‌ನಲ್ಲಿ ಕೆನಡಾದ ಎದುರಾಳಿಯ ವಿರುದ್ಧ ಸ್ವಲ್ಪ ಕಷ್ಟಪಟ್ಟರು. ಮೊದಲ ಗೇಮ್‌ನಲ್ಲಿ ಮಿಚೆಲ್ ನೆಟ್‌ನ ಹತ್ತಿರ ಆಡುವ ಮೂಲಕ ಪಾಯಿಂಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ ಸಿಂಧು ಹೆಚ್ಚು ಆಕ್ರಮಣಕಾರಿ ಆಟವಾಡಿದರು. ವಿರಾಮದ ನಂತರ ಸಿಂಧು ಮೂರು ನೇರ ಅಂಕಗಳನ್ನು ಪಡೆದು ಅಂತಿಮವಾಗಿ ಗೆಲುವುದನ್ನ ದಾಖಲಿಸಿದರು.

ಮಾಜಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಸಿಂಧು ಕಳೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು ಮತ್ತು 2018 ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅವರು 2016 ರ ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಮತ್ತು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದರು.

ಪಿ.ವಿ. ಸಿಂಧು 2018ರ ಸಿಡಬ್ಲ್ಯೂಜಿಯ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು 2014 ರ ಸಿಡಬ್ಲ್ಯೂಜಿ ಮಹಿಳಾ ಸಿಂಗಲ್ಸ್ ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು.

ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು 55 ಪದಕಗಳು ಬಂದಿದ್ದು 18 ಚಿನ್ನ, 15 ಬೆಳ್ಳಿ ಹಾಗೂ 22 ಕಂಚು ಸೇರಿದೆ.

Latest Indian news

Popular Stories