2016ರಲ್ಲಿ ತೆರೆಕಂಡು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿತ್ತು ಆಮೀರ್ ಖಾನ್ ನಟನೆಯ ದಂಗಲ್ ಸಿನಿಮಾ. ಇದೀಗ ಇದೇ ಸಿನಿಮಾದಲ್ಲಿ ನಟಿಸಿದ್ದ ಬಾಲ ನಟಿ ಸುಹಾನಿ ಭಟ್ನಾಗರ್ ನಿಧನರಾಗಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಆಕೆಗೆ ಈಗಿನ್ನೂ ಕೇವಲ 19 ವರ್ಷ ವಯಸ್ಸು!
ಅಮೀರ್ ಖಾನ್ ನಟನೆಯ ‘ದಂಗಲ್’ ಚಿತ್ರದಲ್ಲಿ ಆಮೀರ್ ಕಿರಿ ಮಗಳು ಬಬಿತಾ ಪಾತ್ರದಲ್ಲಿ ನಟಿಸಿದ್ದ ನಟಿ ಸುಹಾನಿ ಭಟ್ನಾಗರ್ ವಿಧಿವಶರಾಗಿದ್ದಾರೆ. ಈಗಿನ್ನು ಬಣ್ಣದ ಲೋಕದಲ್ಲಿ ಪುಟ್ಟ ಹೆಜ್ಜೆಯನ್ನಿಡುತ್ತಿದ್ದ ಸುಹಾನಿ, ಬಾಲಿವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದಳು. ಅದರಂತೆ, ನಟನೆಯ ಜತೆಗೆ ಫ್ಯಾಷನ್ ಕಡೆಗೂ ಒಲವು ಬೆಳೆಸಿಕೊಂಡಿದ್ದಳು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಹೀಗೆ ನೂರಾರು ಕನಸು ಕಟ್ಟಿದ್ದ ಮಗಳು ಈಗ ಇಲ್ಲ ಎಂಬ ನೋವಿನಲ್ಲಿ ಇಡೀ ಕುಟುಂಬ ಕಣ್ಣೀರಿಡುತ್ತಿದೆ.
ಜೂನಿಯರ್ ಬಬಿತಾ ಫೋಗಟ್ ಪಾತ್ರದಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್ ಇತ್ತೀಚೆಗಷ್ಟೇ ಅಪಘಾತವಾಗಿತ್ತು. ಆ ಅಪಘಾತದಿಂದ ಅವರ ಕಾಲಿನ ಮೂಳೆ ಮುರಿದಿತ್ತು. ಜತೆಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಇದೀಗ ಇವರ ಸಾವಿನ ಸುದ್ದಿ ಮುನ್ನೆಲೆಗೆ ಬಂದಿದೆ. ಸಾವಿಗೆ ನಿಖರ ವಿಚಾರ ಏನು ಎಂಬ ಬಗ್ಗೆ ಅಧಿಕೃತವಾಗಿ ಹೊರಬಿದ್ದಿಲ್ಲವಾದರೂ, ಔಷಧಿ ಮಾತ್ರೆಗಳ ಸೈಡ್ ಎಫೆಕ್ಟ್‌ನಿಂದ ಸುಹಾನಿ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಕೆಲ ತಿಂಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸುಹಾನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಇವರ ಸಾವಿನ ಸುದ್ದಿ ಸಿನಿಮಾ ಕ್ಷೇತ್ರದ ಆಪ್ತರಿಗೆ ಶಾಕ್ ನೀಡಿದೆ. ಇಂದು (ಫೆ. 17) ಸುಹಾನಿ ಅವರ ಅಂತ್ಯಕ್ರಿಯೆಯನ್ನು ದೆಹಲಿಯ ಫರಿದಾಬಾದ್‌ನ ಸೆಕ್ಟರ್ -15ರಲ್ಲಿನ ಅಜ್ರೌಂಡಾ ಸ್ಮಶಾನದಲ್ಲಿ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ.