ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ಛಾವಣಿ ಕುಸಿತ, ಒರ್ವ ಮೃತ್ಯು | 7 ಮಂದಿಗೆ ಗಾಯ | ವಿಮಾನ ಹಾರಾಟ ರದ್ದು

ನವದೆಹಲಿ: ಬಿಡುವಿಲ್ಲದೆ ಸುರಿಯುವ ಮಳೆಯ ನಡುವೆ ಶುಕ್ರವಾರ ನಸುಕಿನ ಜಾವ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ನಿರ್ಗಮನ ಗೇಟ್‌ನಲ್ಲಿನ ಮೇಲ್ಛಾವಣಿ ಭಾಗವು ಕುಸಿದು ಬಿದ್ದ ಪರಿಣಾಮ ಒರ್ವ ಮೃತಪಟ್ಟು 7 ಮಂದಿ ಗಾಯಗೊಂಡಿದ್ದಾರೆ, ದುರ್ಘಟನೆಯಲ್ಲಿ ಟ್ಯಾಕ್ಸಿಗಳು ಮತ್ತು ಕಾರುಗಳು ಸೇರಿದಂತೆ ಅನೇಕ ವಾಹನಗಳು ಜಖಂಗೊಂಡಿವೆ.

ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಟರ್ಮಿನಲ್ 1 ರಲ್ಲಿ ದುರ್ಘಟನೆ ನಡೆದಿದ್ದು, ಸುರಕ್ಷತಾ ಕ್ರಮಗಳಾಗಿ ಟರ್ಮಿನಲ್‌ನಿಂದ ಎಲ್ಲಾ ಚೆಕ್-ಇನ್‌ ಮತ್ತು ನಿರ್ಗಮನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ(DIAL) ತಿಳಿಸಿದೆ.

ಇದಲ್ಲದೆ, ಟರ್ಮಿನಲ್ 1 ರಿಂದ ಕಾರ್ಯನಿರ್ವಹಿಸುವ ಎರಡು ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಸ್ಪೈಸ್‌ಜೆಟ್‌ಗಳ ವಿಮಾನ ಕಾರ್ಯಾಚರಣೆಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ.

ಟರ್ಮಿನಲ್ 2 ಮತ್ತು 3 ರಿಂದ ನಿಗದಿತ ವಿಮಾನಗಳ ನಿರ್ಗಮನವನ್ನು ಬದಲಾಯಿಸಲು ನಾವು ವಿಮಾನಯಾನ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ನಿರ್ಗಮನದ ಮುಂಭಾಗದ ಮೇಲಾವರಣ ಮತ್ತು ಸಪೋರ್ಟ್ ಬೀಮ್ ಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Indian news

Popular Stories